ಮುಜಾಫರನಗರ: ಉತ್ತರಪ್ರದೇಶದ ಮುಜಾಫರನಗರದಲ್ಲಿ ಅತ್ಯಾಚಾರಿಗಳು ಹೇಯ ಕೃತ್ಯ ಎಸಗಿದ್ದಾರೆ. ಹಸುಗೂಸಿಗೆ ಚಾಕು ಹಿಡಿದು ತಾಯಿ ಮೇಲೆ ನಾಲ್ವರು ಕಾಮಾಂಧರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಮುಜಾಫರನಗರದ ಬೋಪ ನಗರದಲ್ಲಿ ಈ ಘಟನೆ ನಡೆದಿದೆ. ಮಗುವಿಗೆ ಹುಷಾರಿಲ್ಲದ ಕಾರಣ, ದಂಪತಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿ, ಮನೆಗೆ ಬೈಕ್ ನಲ್ಲಿ ವಾಪಸ್ ಆಗುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ದಂಪತಿಗಳನ್ನು ಅಡ್ಡಗಟ್ಟಿ, ದಂಪತಿ ಕೈಯಲ್ಲಿದ್ದ ಮಗುವನ್ನು ಕಸಿದಿದ್ದಾರೆ. ಬಳಿಕ ಮಗುವಿನ ಕುತ್ತಿಗೆಗೆ ಚಾಕು ಇಟ್ಟು, ಪತಿಯ ತಲೆಗೆ ಗನ್ ಇಟ್ಟು ಬೆದರಿಕೆ ಹಾಕಿದ್ದಾರೆ.
ಮಹಿಳೆಯನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಈ ವೇಳೆ ಮಹಿಳೆಯ ಪತಿ ಆಕೆಯನ್ನು ರಕ್ಷಿಸಲು ಮುಂದಾಗಿದ್ದಾನೆಯಾದರೂ ಆತನನ್ನು ಹಿಡಿದ ದುಷ್ಕರ್ಮಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ವಿಚಾರ ಬಹಿರಂಗ ಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿ ಅತ್ಯಾಚಾರ ಗೈದು ಕಾರಿನಲ್ಲಿ ಪರಾರಿಯಾಗಿದ್ದಾರೆ. ಘಟನೆ ಬಳಿಕ ಸ್ಥಳೀಯ ರೈತನ ನೆರವು ಪಡೆದ ದಂಪತಿಗಳು ಮುಜಾಫರ್ ನಗರ ಠಾಣೆಗೆ ಆಗಮಿಸಿ ಪೊಲೀಸರಿಗೆ ದೂರು ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಈ ಬಗ್ಗೆ ಸಂತ್ರಸ್ತ ಮಹಿಳೆ ಪೊಲೀಸರಿಗೆ ಹೇಳಿಕೆ ನೀಡಿದ್ದು, ಆಸ್ಪತ್ರೆಯಿಂದ ವಾಪಸ್ ಮನೆಗೆ ತೆರಳುವಾಗ ಕಾರಿನಲ್ಲಿ ಬಂದ ನಾಲ್ಕು ಮಂದಿ ದುಷ್ಕರ್ಮಿಗಳು ನನ್ನ ಮಗುವನ್ನು ಕಸಿದು, ಗಂಡನ ಕೈಕಾಲಿಗೆ ಹಗ್ಗವನ್ನು ಕಟ್ಟಿದರು. ಬಳಿಕ ನನ್ನನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಸಾಮೂಹಿಕ ಅತ್ಯಾಚಾರ ಗೈದು ಬೆದರಿಕೆ ಹಾಕಿ ಪರಾರಿಯಾದರು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics