ಎಲ್ ಇಟಿ ಉಗ್ರ ಅಬ್ದುಲ್ ಕರೀಂ ತುಂಡಾ (ಸಂಗ್ರಹ ಚಿತ್ರ)
ಸೋನಿಪತ್: 1996ರ ಸೋನಿಪತ್ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಲಷ್ಕರ್ ಇ ತೊಯ್ಬಾ ಉಗ್ರ ಅಬ್ದುಲ್ ಕರೀಂ ತುಂಡಾಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ನಿನ್ನೆಯಷ್ಟೇ ಪ್ರಕರಣದ ಅಂತಿಮ ವಿಚಾರಣೆ ನಡೆಸಿದ್ದ ನ್ಯಾಯಾಲಯ ಬಾಂಬ್ ಸ್ಫೋಟ ಪ್ರಕರಣದಲ್ಲಿ ತುಂಡಾ ಅಪರಾಧಿ ಎಂದು ತೀರ್ಪು ನೀಡಿತ್ತು. ಅಂತೆಯೇ ಶಿಕ್ಷೆ ಪ್ರಮಾಣ ಘೋಷಣೆಯನ್ನು ಇಂದಿಗೆ ಮುಂದೂಡಿತ್ತು. ಇದೀಗ ಉಭಯ ವಕೀಲರ ವಾದ ಆಲಿಸಿದ ನ್ಯಾಯಾಲಯ ಅಬ್ದುಲ್ ಕರೀಂ ತುಂಡಾಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಕುಖ್ಯಾತ ಉಗ್ರ ತುಂಡಾ ವಿರುದ್ಧದ ಐಪಿಸಿ ಸೆಕ್ಷನ್ 307 (ಕೊಲೆ ಯತ್ನ ಆರೋಪ), 120 ಬಿ (ಅಪರಾಧ ಸಂಚು) ಮತ್ತು ಸ್ಫೋಟಕ ಸಾಮಗ್ರಿಗಳ ಕಾಯ್ದೆಯಡಿ ಆರೋಪಗಳು ಸಾಬೀತಾಗಿದ್ದವು. 1996ರಲ್ಲಿ ಸೋನೆಪತ್ ನಲ್ಲಿ ನಡೆದಿದ್ದ ಅವಳಿ ಸ್ಫೋಟದಲ್ಲಿ ಕನಿಷ್ಟ 15 ಮಂದಿ ಗಾಯಗೊಂಡಿದ್ದರು. ಸಿನಿಮಾ ಮಂದಿರದ ಬಳಿ ಒಂದು ಮತ್ತು ಸ್ವೀಟ್ ಶಾಪ್ ಬಳಿ ಮತ್ತೊಂದು ಒಟ್ಟು ಎರಡು ಬಾಂಬ್ ಗಳು ಸ್ಫೋಟವಾಗಿದ್ದವು.
ಅಬ್ದುಲ್ ಕರೀಂ ತುಂಡಾ ಹಿನ್ನಲೆ:
26/11 ಮುಂಬೈ ದಾಳಿ ಬಳಿಕ ಪಾಕಿಸ್ತಾನದ ಬಳಿ ಭಾರತ ಹಸ್ತಾಂತರ ಕೋರಿದ್ದ 20 ಉಗ್ರರ ಪೈಕಿ ಕರೀಂ ತುಂಡಾ ಒಬ್ಬನಾಗಿದ್ದಾನೆ. 1996ರಲ್ಲಿ ಆತನ ಬಂಧನಕ್ಕೆ ಇಂಟರ್‌ಪೋಲ್ ರೆಡ್‌ಕಾರ್ನರ್ ನೋಟಿಸ್ ಜಾರಿಮಾಡಿತ್ತು. 1994ರಲ್ಲಿ ತುಂಡಾನನ್ನು ಭೇಟಿಯಾಗಿದ್ದ ಅಲ್ಲಾವುದ್ದೀನ್ ಮತ್ತು ಬಷೀರುದ್ದೀನ್, ಜಕಾರಿಯಾ ನೆರವಿನಿಂದ ಲಷ್ಕರ್ ಉಗ್ರ ಸಂಘಟನೆ ಸೇರಿದ್ದರು.
ಪಾಕಿಸ್ತಾನ ಮತ್ತು ಬಾಂಗ್ಲಾ ಉಗ್ರಗಾಮಿಗಳ ತಂಡ ರಚಿಸಿದ್ದ ತುಂಡಾ, 1998ರಲ್ಲಿ ದೇಶದ ಹಲವೆಡೆ ಸರಣಿ ಬಾಂಬ್ ಸ್ಫೋಟದ ಸಂಚು ರೂಪಿಸಿದ್ದ ಎನ್ನಲಾಗಿದೆ. ಸ್ಫೋಟದ ಬಳಿಕ ತಲೆಮರೆಸಿಕೊಂಡಿದ್ದ ಕರೀಂ ತುಂಡಾನನ್ನು 2013 ಆಗಸ್ಟ್ ನಲ್ಲಿ ಭಾರತ-ನೇಪಾಳ ಗಡಿಯಲ್ಲಿ ಬಂಧಿಸಲಾಗಿತ್ತು. ತುಂಡಾ ವಿರುದ್ಧ ದಾಖಲಾಗಿದ್ದ 4 ಪ್ರಕರಣಗಳ ಪೈಕಿ ಮೂರರಲ್ಲಿ ಈಗಾಗಲೇ ಆತ ದೋಷಮುಕ್ತನಾಗಿದ್ದ. ಇದೀಗ ನಾಲ್ಕನೇ ಪ್ರಕರಣದಲ್ಲಿ ತುಂಡಾ ಅಪರಾಧಿಯಾಗಿ ಜೀವಾವಧಿ ಶಿಕ್ಷೆ ಎದುರಿಸುವಂತಾಗಿದೆ.