ಪಂಚಕುಲ: ಅತ್ಯಾಚಾರ ಪ್ರಕರಣದಲ್ಲಿ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿ ಎಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿದ ಬಳಿಕ ಪಂಚಕುಲದಲ್ಲಿ ನಡೆದ ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಅತ್ಯಾಚಾರಿ ಬಾಬಾ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ಹಾಗೂ ಆಕೆಯ ಆಪ್ತ ಸುಖದೀಪ್ ಕೌರ್ ರನ್ನು ಪಂಚಕುಲ ಕೋರ್ಟ್ ಅಕ್ಟೋಬರ್ 23ರ ವರೆಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.
ಕಳೆದ ಒಂಬತ್ತು ದಿನಗಳಿಂದ ಪೊಲೀಸ್ ವಶದಲ್ಲಿದ್ದ ಹನಿಪ್ರೀತ್ ಹಾಗೂ ಸುಖದೀಪ್ ಕೌರ್ ರನ್ನು ಹರಿಯಾಣ ಪೊಲೀಸರು ಇಂದು ಚೀಫ್ ಜುಡಿಶಿಯಲ್ ಮ್ಯಾಜಿಸ್ಟ್ರೇಟ್ ರೋಹಿತ್ ವಟ್ಸ್ ಅವರ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳನ್ನು ಅಕ್ಟೋಬರ್ 23ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ನಿನ್ನೆಯಷ್ಟೇ ಹರಿಯಾಣದ ವಿಶೇಷ ತನಿಖಾ ತಂಡದ(ಎಸ್‌ಐಟಿ) ಮುಂದೆ ಆಗಸ್ಟ್ 25ರಂದು ನಡೆದಿದ್ದ ಹಿಂಸಾಚಾರದಲ್ಲಿ ತನ್ನ ಪಾತ್ರವಿರುವುದಾಗಿ ಹನಿಪ್ರೀತ್ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು.
ತನ್ನನ್ನು ತಾನು ರಾಮ್ ರಹೀಂ ಸಿಂಗ್ ದತ್ತು ಪುತ್ರಿ ಎಂದು ಕರೆದುಕೊಂಡಿರುವ ಹನಿಪ್ರೀತ್ ಳನ್ನು ಅಕ್ಟೋಬರ್ 3ರಂದು ಹರಿಯಾಣ ಪೊಲೀಸರು ಬಂಧಿಸಿದ್ದರು.