ದೇಶ

ಭಕ್ತಾದಿಗಳಿಂದ ಹಣ ಪಡೆದ ಆರೋಪ: ಟಿಟಿಡಿಯಿಂದ 243 ಕ್ಷೌರಿಕರ ವಜಾ

Srinivas Rao BV
ತಿರುಮಲ: ತಿರುಪತಿ ದೇವಾಲಯದ ಆಡಳಿತ ಹೊಣೆ ಹೊತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಭಕ್ತಾದಿಗಳಿಂದ ಹಣ ಪಡೆದಿರುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ 243 ಕ್ಷೌರಿಕರನ್ನು ವಜಾಗೊಳಿಸಿದೆ. 
ದರ್ಶನ ಪಡೆಯುವುದಕ್ಕೂ ಮುನ್ನ ಮುಡಿ ಕೊಡಲು ಇಚ್ಛಿಸುವ ಭಕ್ತಾದಿಗಳಿಗೆ ಉಚಿತ ಸೌಲಭ್ಯ ನೀಡುವುದು ಟಿಟಿಡಿ ನಿಯಮವಾಗಿದೆ. ಆದರೆ ಮುಡಿ ಕೊಡುವ ಭಕ್ತಾದಿಗಳಿಂದ ಕ್ಷೌರಿಕರು 10 ರಿಂದ 50 ರೂಪಾಯಿ ಹಣ ಪಡೆಯುತ್ತಿದ್ದರೆಂದು ಭಕ್ತಾದಿಗಳು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಟಿಟಿಡಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕ್ಷೌರಿಕರಿಗೆ ನೋಟೀಸ್ ಜಾರಿ ಮಾಡಿತ್ತು. 
ನೋಟಿಸ್ ಜಾರಿಗೊಳಿಸಿದ ಬೆನ್ನಲ್ಲೇ, ಟಿಟಿಡಿ 243 ಕ್ಷೌರಿಕರನ್ನು ವಜಾಗೊಳಿಸಿದೆ. ಟಿಟಿಡಿ ಆದೇಶವನ್ನು ಪ್ರಶ್ನಿಸಿ ಕ್ಷೌರಿಕರು ಪ್ರತಿಭಟನೆ ನಡೆಸುತ್ತಿದ್ದು, ಈ ಕ್ರಮದಿಂದಾಗಿ ತಮ್ಮ ಜೀವನ ನಿರ್ವಹಣೆ ಕಷ್ಟವಾಗಲಿದೆ, ಆದ್ದರಿಂದ ಮಾನವೀಯತೆ ದೃಷ್ಟಿಯಿಂದ ಆದೇಶವನ್ನು ವಾಪಸ್ ಪಡೆಯಬೇಕೆಂದು ಪ್ರತಿಭಟನಾ ನಿರತರು ಒತ್ತಾಯಿಸಿದ್ದಾರೆ.
SCROLL FOR NEXT