ಲಖನೌ: ತಾಜ್ ಮಹಲ್ ನ್ನು ಪ್ರವಾಸಿ ತಾಣದ ಪಟ್ಟಿಯಿಂದ ಹೊರಗಿಡಲಾಗಿರುವ ನಿರ್ಧಾರವನ್ನು ಬಿಜೆಪಿ ಶಾಸಕ ಸಂಗೀತ್ ಸೋಮ್ ಸ್ವಾಗತಿಸಿರುವ ಬೆನ್ನಲ್ಲೆ, ತಾಜ್ ಮಹಲ್ ನಮಗೆ ಅತ್ಯಂತ ಪ್ರಮುಖ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ತಾಜ್ ಮಹಲ್ ನಮಗೆ ಅತ್ಯಂತ ಪ್ರಮುಖವಾದದ್ದು, ವಿಶೇಷವಾಗಿ ಪ್ರವಾಸೋದ್ಯಮ ದೃಷ್ಟಿಯಿಂದ. ತಾಜ್ ಮಹಲ್ ಗೆ ಭೇಟಿ ನೀಡುವ ಪ್ರವಾಸಿಗರಿಗೆ ಭದ್ರತೆ ಹಾಗೂ ಸೌಲಭ್ಯ ಒದಗಿಸುವುದು ನಮ್ಮ ಆದ್ಯತೆ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಇದೇ ವೇಳೆ ಸಂಗೀತ್ ಸೋಮ್ ಹೇಳಿಕೆಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಯೋಗಿ ಆದಿತ್ಯನಾಥ್, ಯಾರು ನಿರ್ಮಾಣ ಮಾಡಿದರು, ಯಾವುದಕ್ಕಾಗಿ ನಿರ್ಮಾಣ ಮಾಡಿದರು ಎಂಬುದು ಮುಖ್ಯವಲ್ಲ, ತಾಜ್ ಮಹಲ್ ನಿರ್ಮಾಣವಾಗಿದ್ದು ಭಾರತೀಯ ಕಾರ್ಮಿಕರ ರಕ್ತ ಹಾಗೂ ಶ್ರಮದಿಂದ, ಹಾಗಾಗಿ ತಾಜ್ ಮಹಲ್ ನಮಗೆ ಅತ್ಯಂತ ಮುಖ್ಯವಾಗುತ್ತದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.