ನವದೆಹಲಿ: ಅ.24 ರಂದು ಲಖನೌ-ಆಗ್ರಾ ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಐಎಎಫ್ ಜೆಟ್ ಗಳು ಬಂದಿಳಿಯಲಿವೆ.
ಭಾರತೀಯ ವಾಯುಪಡೆ, ಉತ್ತರ ಪ್ರದೇಶ ಸರ್ಕಾರದ ಸಹಯೋಗದಲ್ಲಿ ಕೈಗೊಂಡಿರುವ ಕಾರ್ಯಾಚರಣೆಯ ತಾಲೀಮಿನ ಭಾಗವಾಗಿ 32 ಟ್ರಾಸ್ಪೋರ್ಟ್ ವಿಮಾನಗಳು, ಎಸ್ ಯು-30 ಸೇರಿದಂತೆ ಐಎಎಫ್ ನ ಮುಂಚೂಣಿಯಲ್ಲಿರುವ ಫೈಟರ್ ಜೆಟ್ ಗಳು ಹಾಗೂ ಮಿರಾಜ್-2000 ವಿಮಾನಗಳು ಹೆದ್ದಾರಿಯಲ್ಲಿ ಬಂದಿಳಿಯಲಿವೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಹೆದ್ದಾರಿಗಳಲ್ಲಿ ಫೈಟರ್ ಜೆಟ್ ಗಳನ್ನು ಇಳಿಸುವ ಸಾಮರ್ಥ್ಯವನ್ನು ಪ್ರದರ್ಶಿಸುವ ಉದ್ದೇಶದಿಂದ 2016 ರ ಮೇ 21 ರಂದು ಮಿರಾಜ್-2000 ಫೈಟರ್ ವಿಮಾನ ಯಮುನಾ ಎಕ್ಸ್ ಪ್ರೆಸ್ ನಲ್ಲಿ ಲ್ಯಾಂಡ್ ಆಗಿತ್ತು. ಇದೇ ಮಾದರಿಯಲ್ಲಿ ಫೈಟರ್ ಜೆಟ್ ಗಳನ್ನು ಲ್ಯಾಂಡ್ ಮಾಡಿಸಲು 12 ಹೈವೆ ಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಮೂರು ಹೆದ್ದಾರಿಗಳು ನಕ್ಸಲರು ಹೆಚ್ಚಿರುವ ಹಾಗೂ ಪದೇ ಪದೇ ಪ್ರವಾಹ ಉಂಟಾಗುವ ಒಡಿಶಾ, ಜಾರ್ಖಂಡ್, ಚತ್ತೀಸ್ ಗಢವನ್ನು ಸಂಪರ್ಕಿಸುತ್ತವೆ. ಈ ಹೆದ್ದಾರಿಗಳನ್ನು ತುರ್ತು ಸಂದರ್ಭಗಳಲ್ಲಿ ಬಳಕೆ ಮಾಡಿಕೊಳ್ಳುವ ಉದ್ದೇಶ ಹೊಂದಲಾಗಿದೆ.