ನವದೆಹಲಿ: ಅಚ್ಚರಿ ಬೆಳವಣಿಗೆಯಲ್ಲಿ ದಶಕಗಳ ಹಿಂದಿನ ಬಹುಕೋಟಿ ಬೋಫೋರ್ಸ್ ಹಗರಣವನ್ನು ಮರು ತನಿಖೆ ಮಾಡಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸಿಬಿಐ ಮನವಿ ಮಾಡಿದೆ.
ಈ ಹಿಂದಿನ ಕಾಂಗ್ರೆಸ್ ಸರ್ಕಾರದ ತಲೆ ನೋವಿಗೆ ಕಾರಣವಾಗಿದ್ದ ಮತ್ತು ಮುಚ್ಚಿಹೋಗಿರುವ ಕುಖ್ಯಾತ ಬೊಫೋರ್ಸ್ ಹಗರಣಕ್ಕೆ ಮತ್ತೆ ಮರುಜೀವ ಬರುವ ಸಾಧ್ಯತೆಯಿದ್ದು, ಪ್ರಕರಣದ ತನಿಖೆಯನ್ನು ಪುನರಾರಂಭ ಮಾಡಲು ಸಿಬಿಐ ಕೇಂದ್ರ ಸರ್ಕಾರದ ಅನುಮತಿ ಕೋರಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಲು ಅನುಮತಿ ನೀಡುವಂತೆ ಸಿಬಿಐ ಸಂಸ್ಥೆ ಕೇಂದ್ರ ಸರ್ಕಾರವನ್ನು ಕೋರಿದ್ದು, ಒಂದು ವೇಳೆ ಸುಪ್ರೀಂ ಕೋರ್ಟ್ ಈ ಮೇಲ್ಮನವಿಯನ್ನು ಅಂಗೀಕರಿಸಿದರೆ ಮತ್ತೆ ದಶಕಗಳ ಹಿಂದಿನ ಕುಖ್ಯಾತ ಹಗರಣದ ತನಿಖೆ ಪುನರಾರಂಭಕ್ಕೆ ಚಾಲನೆ ದೊರೆಯಲಿದೆ.
ಸಿಬಿಐ ಸಂಸ್ಥೆಯ ಈ ಅಚ್ಚರಿ ನಡೆಗೆ ಖಾಸಗಿ ತನಿಖಾ ಸಂಸ್ಥೆಯ ವರದಿ ಕಾರಣ ಎಂದು ಹೇಳಲಾಗುತ್ತಿದ್ದು, ತನಿಖೆಗೆ ಈ ಹಿಂದಿನ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ತನಿಖೆಯ ಹಾದಿ ತಪ್ಪಿಸಿತ್ತು ಎಂಬ ಖಾಸಗಿ ಡಿಟೆಕ್ಟೀವ್ ಮೆಕಾಯಿಲ್ ಹರ್ಶ್‌ಮನ್ ಅವರ ಆರೋಪಗಳ ಕುರಿತಾಗಿ ಪರಿಶೀಲನೆ ನಡೆಸುತ್ತಿರುವುದಾಗಿ ಎರಡು ದಿನಗಳ ಹಿಂದಷ್ಟೇ ಸಿಬಿಐ ವಕ್ತಾರ ಅಭಿಷೇಕ್ ದಯಾಳ್ ಹೇಳಿದ್ದರು.
ಖಾಸಗಿ ಸುದ್ದಿವಾಹಿನಿಯೊಂದರೊಂದಿಗೆ ಮಾತನಾಡಿದ್ದ ಡಿಟೆಕ್ಟೀವ್ ಮೆಕಾಯಿಲ್ ಈ ಕುರಿತು ಹೇಳಿಕೆ ನೀಡಿ ಭಾರಿ ಸುದ್ದಿಗೆ ಗ್ರಾಸವಾಗಿದ್ದರು. ಇದಕ್ಕೂ ಮುನ್ನ ಪ್ರಕರಣದ ಮರುತನಿಖೆಗೆ ಬಿಜೆಪಿ ಸಂಸದರು ಆಗ್ರಹಿಸಿದ್ದರು. ಅಲ್ಲದೆ, ಕಳೆದ ಜುಲೈನಲ್ಲಿ ಸಾರ್ವಜನಿಕ ಲೆಕ್ಕಪತ್ರ ಸಮಿತಿ ನಿರ್ದೇಶನದ ಮೇರೆಗೆ ತನಿಖೆ ಪುನರಾರಂಭಕ್ಕೆ ಸಿಬಿಐ ಒಲವು ತೋರಿತ್ತು ಎನ್ನಲಾಗಿದೆ.