ನವದೆಹಲಿ: 2015ರಲ್ಲಿ ಗುಜರಾತ್ ನಲ್ಲಿ ನಡೆದ ಪಟಿದಾರ್ ಆಂದೋಲನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಒಬಿಸಿ, ಎಸ್ಸಿ ಮತ್ತು ಎಸ್ಟಿ ಎಕ್ತಾ ಮಂಚ್ ನಾಯಕ ಅಲ್ಪೇಶ್ ಥಾಕೋರ್ ತಾವು ಕಾಂಗ್ರೆಸ್ ಸೇರುವುದಾಗಿ ಶನಿವಾರ ಘೋಷಿಸಿದ್ದಾರೆ.
ಅಕ್ಟೋಬರ್ 23ರಂದು ನಡೆಯುವ ನಮ್ಮ ರ್ಯಾಲಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಭಾಗವಹಿಸುತ್ತಿದ್ದು, ಅಂದೇ ತಾವು ಕಾಂಗ್ರೆಸ್ ಸೇರುವುದಾಗಿ ಅಲ್ಫೇಶ್ ಥಾಕೂರ್ ಹೇಳಿರುವುದಾಗಿ ಎನ್ಎನ್ಐ ವರದಿ ಮಾಡಿದೆ.
ಥಾಕೂರ್ ಅವರು ಇದಕ್ಕು ಮುನ್ನ ಹಿರಿಯ ಕಾಂಗ್ರೆಸ್ ನಾಯಕರಾದ ಅಶೋಕ್ ಗೆಹ್ಲೋಟ್ ಮತ್ತು ಭರತ್ ಸಿಂಗ್ ಸೋಲಂಕಿ ಅವರೊಂದಿಗೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು
ಇಂದು ಬೆಳಗ್ಗಯಷ್ಟೇ ಈ ವರ್ಷಾಂತ್ಯಕ್ಕೆ ನಡೆಯುವ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಲು ಕಾಂಗ್ರೆಸ್ ನೊಂದಿಗೆ ಕೈಜೋಡಿಸುವಂತೆ ಪಟೇಲ್ ಸಮುದಾಯದ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್, ಥಾಕೂರ್ ಸಮುದಾಯ ಅಲ್ಪೇಶ್ ಥಾಕೂರ್ ಹಾಗೂ ದಲಿತ ನಾಯಕ ಜಿಗ್ನೇಶ್ ಮೆವಾನಿ ಅವರಿಗೆ ಸೋಲಂಕಿ ಅವರು ಆಹ್ವಾನ ನೀಡಿದ್ದರು.