ಚೆನ್ನೈ: ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಪಕ್ಷಕ್ಕೆ ಬಿಜೆಪಿ ಅಥವಾ ಯಾವುದೇ ರಾಜಕೀಯ ಪಕ್ಷದ ಸಹಾಯದ ಅಗತ್ಯವಿಲ್ಲ ಎಂದು ಕೆ.ಪಿ.ಮುನುಸಾಮಿಯವರು ಭಾನುವಾರ ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಎಂಜಿಆರ್ ಹಾಗೂ ಅಮ್ಮಾ ಜಯಲಲಿತಾ ಅವರ ಹಾದಿಯಂತೆ ನಡೆಯುತ್ತೇವೆ. ನಮಗೆ ಬಿಜೆಪಿ ಅಥವಾ ಯಾವುದೇ ರಾಜಕೀಯ ಪಕ್ಷಗಳ ಸಹಾಯದ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಎಡಪ್ಪಾಡಿ ಕೆ. ಪಳನಿಸ್ವಾಮಿ ಹಾಗೂ ಒ. ಪನ್ನೀರ್ ಸೆಲ್ವಂ ಅವರಿಬ್ಬರ ನಡುವೆ ಕೆಲ ಮನಸ್ತಾಪಗಳಿವೆ. ಶೀಘ್ರದಲ್ಲಿಯೇ ಸಮಸ್ಯೆಗಳು ಶಮನಗೊಳ್ಳಲಿವೆ. ಚುನಾವಣಾ ಆಯೋಗಕ್ಕೆ ನಾವು ಸಲ್ಲಿಸಿರುವ ಅಫಿಡವಿಟ್ ಎಲ್ಲವೂ ಸರಿಯಿದೆ. ಆದರೆ, ಶಶಿಕಲಾ ಗುಂಪಿನವರು ನಕಲಿ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದಾರೆಂದು ತಿಳಿಸಿದ್ದಾರೆ.
ಶಶಿಕಲಾ ಹಾಗೂ ಪಳನಿಸ್ವಾಮಿ ಅವರು ಪಕ್ಷದ ಚಿಹ್ನೆ ತಮಗೆ ಸೇರಬೇಕು ಎಂದು ಬೇಡಿಕೆಯಿಟ್ಟ ಕಾರಣ ಮಾರ್ಚ್ 23 ರಂದು ಚುನಾವಣಾ ಆಯೋಗವು ಪಕ್ಷದ ಹೆಸರು ಹಾಗೂ ಚಿಹ್ನೆಯನ್ನು ಅಮಾನತಿನಲ್ಲಿಟ್ಟಿದೆ. ಆಗಸ್ಟ್ 21 ರಂದು ಮುಖ್ಯಮಂತ್ರಿ ಪಳನಿಸ್ವಾಮಿ ಅವರು ಶಶಿಕಲಾ ವಿರುದ್ಧ ಬಂಡಾಯ ಸಾರಿದ್ದರು. 7 ತಿಂಗಳ ಭಿನ್ನಮತ ಕೊನೆಯಾಗಿ ಪಳನಿಸ್ವಾಮಿ ಬಣ ಹಾಗೂ ಪನ್ನೀರಸೆಲ್ವಂ ಬಣ ಒಂದಾಗಿದ್ದವು.
ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಸಚಿವ ಕೆ.ಟಿ. ರಾಜೇಂದ್ರ ಬಾಲಾಜಿಯವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಮ್ಮೊಂದಿಗೆ ಇದ್ದಾರೆ. ಪಕ್ಷವನ್ನು ಬೆಂಬಲಿಸುತ್ತಿದ್ದಾರೆ. ಹೀಗಾಗಿ ಯಾವು ನಮ್ಮನ್ನು ಅಲುಗಾಡಿಸಲು ಸಾಧ್ಯವಿಲ್ಲ. ಪಕ್ಷವನ್ನು ಯಾರಿಂದಲೂ ನಾಶಪಡಿಸಲು ಆಗುವುದಿಲ್ಲ ಎಂದು ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics