ನವದೆಹಲಿ: ಜಪಾನ್ ಸಂಸತ್ತಿಗೆ ನಡೆದ ದಿಢೀರ್ ಚುನಾವಣೆಯಲ್ಲಿ ಪ್ರಧಾನಮಂತ್ರಿ ಶಿಂಜೋ ಅಬೆಯವರು ಗೆಲವು ಸಾಧಿಸಿರುವ ಹಿನ್ನಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಭಿನಂದನೆಗಳನ್ನು ತಿಳಿಸಿದ್ದಾರೆ.
ಸಂಸತ್ತಿನಲ್ಲಿ ತಮ್ಮ ಬಹುಮತ ಬಲಗೊಳಿಸುವ ನಿಟ್ಟಿನಲ್ಲಿ ಅಬೆ ಅವರು ಮತದಾನಕ್ಕೆ ಕರೆ ನೀಡಿದ್ದರು. 465 ಸ್ಥಾನಗಳ ಪೈಕಿ 311 ಸ್ಥಾನಗಳಲ್ಲಿ ಶಿಂಜೋ ಅಬೆ ಅವರ ಕನ್ಸರ್ವೇಟಿವ್ ಪಕ್ಷ ಗೆಲವು ಸಾಧಿಸಿದೆ.
ಈ ಹಿನ್ನಲೆಯಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶಿಂಜೋ ಅವರಿಗೆ ಅಭಿನಂದನೆಗಳನ್ನು ತಿಳಿಸಿರುವ ಮೋದಿಯವರು, ಚುನಾವಣೆಯಲ್ಲಿ ದೊಡ್ಡ ಗೆಲವು ಸಾಧಿಸಿರುವ ನನ್ನ ಪ್ರೀತಿಯ ಗೆಳೆಯ ಶಿಂಜೋ ಅಬೆಯವರಿಗೆ ಹೃದಯ ಪೂರ್ವಕವಾಗಿ ಅಭಿನಂದನೆಗಳನ್ನು ತಿಳಿಸುತ್ತಿದ್ದೇನೆ. ನಿಮ್ಮ ಜಯ ಭಾರತ-ಜಪಾನ್ ದ್ವಿಪಕ್ಷೀಯ ಸಂಬಂಧವನ್ನು ಮತ್ತಷ್ಟು ಬಲಗೊಳಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.