ಲಕ್ನೋ: ಆಗ್ರಾದ ಪತ್ತೇಪುರ್ ಸಿಕ್ರಿಯಲ್ಲಿ ಸ್ವಿಸ್ ಜೋಡಿ ಮೇಲೆ ಹಲ್ಲೆ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಲಕ್ನೋದಲ್ಲಿ ಮಾತನಾಡಿದ ಅವರು, ಸೆಲ್ಫಿ ತೆಗೆದುಕೊಳ್ಳಲು ಹೋದ ಸ್ವಿಸ್ ದಂಪತಿ ಮೇಲೆ ಹಲ್ಲೆ ನಡೆಯುವಾಗ ಆ್ಯಂಟಿ ರೋಮಿಯೋ ಸ್ಕ್ಯಾಡ್ ಎಲ್ಲಿತ್ತು ಎಂದು ಪ್ರಶ್ನಿಸಿದ್ದಾರೆ. ಇನ್ನೂ ಪ್ರಕರಣ ಸಂಬಂಧ ವರದಿ ನೀಡುವಂತೆ ಕೇಂದ್ರ ಸರ್ಕಾರ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.
ಸ್ವಿಡ್ಜರ್'ಲ್ಯಾಂಡ್ ದಂಪತಿಗಳು ಕಳೆದ ಭಾನುವಾರ ಆಗ್ರಾದ ಫತೇಪುರ್ ಸಿಕ್ರಿಗೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳದಲ್ಲಿದ್ದ ಕೆಲ ಕಿಡಿಗೇಡಿಗಳು ದಂಪತಿ ಬಗ್ಗೆ ಕೆಟ್ಟ ಪದಗಳನ್ನು ಬಳಕೆ ಮಾಡಿ ಮಾತನಾಡಿದ್ದಾರೆ. ಅಲ್ಲದೆ, ಸೆಲ್ಫೀ ತೆಗೆದುಕೊಳ್ಳುತ್ತಿದ್ದ ದಂಪತಿಯನ್ನು ತಡೆದು ಥಳಿಸಿದ್ದಾರೆ.
ಹಲ್ಲೆಗೊಳಗಾದ ದಂಪತಿಗಳನ್ನು ಕ್ವೆಂಟಿನ್ ಜೆರೆಮಿ ಕ್ಲೆರ್ಕ್ ಮತ್ತು ಮೇರಿ ಡ್ರೋಕ್ಸ್ ಎಂದು ಗುರ್ತಿಸಲಾಗಿದ್ದು, ಸೆ.30 ರಂದು ದಂಪತಿಗಳು ಭಾರತಕ್ಕೆ ಬಂದಿದ್ದಾರೆ. ಶನಿವಾರ ಆಗ್ರಾಗೆ ಬಂದಿದ್ದು, ರೈಲ್ವೇ ನಿಲ್ದಾಣದಲ್ಲಿ ಓಡಾಡುತ್ತಿದ್ದ ವೇಳೆ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ಗಾಯಗೊಂಡ ದಂಪತಿಯನ್ನು ಚಿಕಿತ್ಸೆಗಾಗಿ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ.