ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ (ಸಂಗ್ರಹ ಚಿತ್ರ)
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಎರಡನೇ ಬಾರಿಗೆ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ನೇಮಕರಾದ ಬೆನ್ನಲ್ಲೇ ಚೀನಾದ ಮಹತ್ವಾಕಾಂಕ್ಷಿ ಯೋಜನೆ ಒನ್ ಬೆಲ್ಟ್ ಒನ್ ರೋಡ್ ಗೆ ಭಾರತ ಷರತ್ತುಬದ್ಧ ಬೆಂಬಲ ನೀಡಲು ಸಿದ್ಧವಾಗಿದೆ.
ಪಾಕಿಸ್ತಾನವನ್ನೂ ಒಳಗೊಂಡಿರುವ ಚೀನಾದ ಒಬೋರ್ ಯೋಜನೆ ನ್ಯಾಯಸಮ್ಮತವಾಗಿದ್ದರೆ ಮಾತ್ರ ಭಾರತ ಅದಕ್ಕೆ ಬೆಂಬಲ ನೀಡುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿದೇಶಾಂಗ ಇಲಾಖೆಯ ವಕ್ತಾರ ರವೀಶ್ ಕುಮಾರ್ ಅವರು, ಚೀನಾದ ಒಬೋರ್ ಯೋಜನೆಗೆ ಸಂಬಂಧಿಸಿದಂತೆ ಭಾರತ ಈಗಲೂ ತನ್ನ ನಿಲುವಿಗೆ ಬದ್ಧವಾಗಿದೆ. ಒಬೋರ್ ಯೋಜನೆ ನ್ಯಾಯಸಮ್ಮತ ಮತ್ತು ಪ್ರತಿಯೊಬ್ಬರಿಗೂ ಸಮಾನವಾಗಿದ್ದರೆ ಮಾತ್ರ ಭಾರತ ಅದಕ್ಕೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.
ಅಂತೆಯೇ ವಿವಾದಿತ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಯೋಜನೆ ಹಾದು ಹೋಗಿರುವುದರ ವಿರುದ್ಧದ ತನ್ನ ವಿರೋಧವನ್ನು ಭಾರತ ಮುಂದುವರೆಸಿದೆ.
ಇನ್ನು 2ನೇ ಬಾರಿಗೆ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಕ್ಸಿ ಜಿನ್ ಪಿಂಗ್ ಅವರ ಕುರಿತಂತೆ ಮಾತನಾಡಿದ ರವೀಶ್ ಕುಮಾರ್ ಅವರು, ಕ್ಸಿ ಜಿನ್ ಪಿಂಗ್ ಅವರಿಗೆ ಈಗಾಗಲೇ ಪ್ರಧಾನಿ ಮೋದಿ ಶುಭಾಶಯ ಕೋರಿದ್ದಾರೆ. ಅಂತೆಯೇ ಕ್ಸಿ ಜಿನ್ ಪಿಂಗ್ ನೇತೃತ್ವದಲ್ಲಿ ಭಾರತ ಮತ್ತು ಚೀನಾ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳಲಿದೆ. ಅಂತೆಯೇ ಭಾರತಕ್ಕೆ ಸಂಬಂಧಿಸಿದಂತೆ ಚೀನಾ ಕಾಂಗ್ರೆಸ್ ನ ನೀತಿಗಳು ದ್ವಿಪಕ್ಷೀಯ ಸಂಬಂಧ ಸುಧಾರಣೆಗೆ ನೆರವಾಗುವ ವಿಶ್ವಾಸವಿದೆ ಎಂದು ರವೀಶ್ ಕುಮಾರ್ ಹೇಳಿದ್ದಾರೆ.
ಭಾರತದ ನಿಲುವು ಸ್ಪಾಗತಿಸಿದ ಚೀನಾ
ಇದೇ ವೇಳೆ ಒಬೋರ್ ಗೆ ಪರೋಕ್ಷ ಒಪ್ಪಿಗೆ ನೀಡಿರುವ ಭಾರತದ ನಿಲುವನ್ನು ಚೀನಾ ಸ್ವಾಗತಿಸಿದ್ದು, ಚೀನಾದ ಬಹು ಉದ್ದೇಶಿತ ಯೋಜನೆಯಲ್ಲಿ ಭಾರತದ ಪಾಲ್ಗೊಳ್ಳುವಿಕೆ ಹೊಸ ಉತ್ತೇಜನ ನೀಡಲಿದೆ ಎಂದು ಹೇಳಿದೆ. ಈ ಬಗ್ಗೆ ಮಾತನಾಡಿರುವ ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಗೆಂಗ್ ಶಾಂಗ್ ಅವರು, ಸ್ವಯಂ ಪ್ರೇರಿತವಾಗಿ ಭಾರತ ಚೀನಾದ ಒಬೋರ್ ಯೋಜನೆಯಲ್ಲಿ ಪಾಲ್ಗೊಳ್ಳುತ್ತಿರುವು ಸ್ವಾಗತಾರ್ಹ ಎಂದು ಹೇಳಿದ್ದಾರೆ.