ನವದೆಹಲಿ: ವಿಮಾನದಲ್ಲಿ ಬೆದರಿಕೆ ಪತ್ರ ಕಂಡುಬಂದ ಹಿನ್ನೆಲೆಯಲ್ಲಿ ಮುಂಬೈಯಿಂದ ದೆಹಲಿಗೆ ಹೊರಟಿದ್ದ ಜೆಟ್ ವಿಮಾನ 9ಡಬ್ಲ್ಯು339ನ್ನು ಅಹ್ಮದಾಬಾದಿಗೆ ಬದಲಾಯಿಸಲಾಯಿತು.
ಇದರಿಂದ ವಿಮಾನ ಯಾವುದೇ ಪೂರ್ವ ಸೂಚನೆ ನೀಡದೆ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ 4.25ಕ್ಕೆ ಬಂದಿಳಿಯಿತು. ಅದನ್ನು ದೂರದ ಕೊಲ್ಲಿಯಲ್ಲಿ ತಂಗಿಸಲಾಯಿತು. ಅಲ್ಲಿ 115 ಪ್ರಯಾಣಿಕರು ಮತ್ತು ಏಳು ಸಿಬ್ಬಂದಿಗಳನ್ನು ಸುರಕ್ಷಿತವಾಗಿ ಇಳಿಸಲಾಯಿತು. ವಿಮಾನ ಇಂದು ನಸುಕಿನ ಜಾವ 2.55ಕ್ಕೆ ಮುಂಬೈಯಿಂದ ಹೊರಟಿತ್ತು.
ಬೆದರಿಕೆ ಕರೆ ಬಗ್ಗೆ ತನಿಖೆ ನಡೆಸುತ್ತಿರುವ ಭದ್ರತಾ ಪಡೆಗಳಿಗೆ ಜೆಟ್ ಏರ್ ವೇಸ್ ಸಂಪೂರ್ಣ ಸಹಕಾರ ನೀಡುತ್ತಿದ್ದು ಈ ಸಂದರ್ಭದಲ್ಲಿ ಹೆಚ್ಚಿನ ವಿವರ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಇದರಿಂದ ಪ್ರಯಾಣಿಕರಿಗೆ ಉಂಟಾಗಿರುವ ಅನಾನುಕೂಲದ ಬಗ್ಗೆ ಜೆಟ್ ಏರ್ ವೇಸ್ ಸಂಸ್ಥೆ ವಿಷಾದ ವ್ಯಕ್ತಪಡಿಸಿದ್ದು ಆದಷ್ಟು ಶೀಘ್ರವೇ ಅವರನ್ನು ದೆಹಲಿಗೆ ಕರೆತರಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಜೆಟ್ ಏರ್ ವೇಸ್ 9ಡಬ್ಲ್ಯು ಬಿಒಎಮ್-ಡಿಎಎಲ್ ಪ್ರಯಾಣಿಕರನ್ನು ಹೊತ್ತು ದೆಹಲಿಗೆ ಸಾಗುತ್ತಿತ್ತು. ಈ ಸಂದರ್ಭದಲ್ಲಿ ವಿಮಾನದ ಶೌಚಾಲಯದಲ್ಲಿ ಬೆದರಿಕೆ ಪತ್ರವೊಂದು ಸಿಬ್ಬಂದಿಗೆ ಕಾಣಿಸಿತು. 9 ಡಬ್ಲ್ಯು 330 ವಿಮಾನವನ್ನು ಹೈಜಾಕ್ ಮಾಡಿ ನೇರವಾಗಿ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಕರೆದೊಯ್ಯಲಾಗುತ್ತದೆ. ವಿಮಾನವನ್ನು ನಿಗದಿತ ಸ್ಥಳದಲ್ಲಿ ಇಳಿಸಲು ಬಿಡುವುದಿಲ್ಲ. ಒಂದು ವೇಳೆ ಬಿಟ್ಟರೆ ಪ್ರಯಾಣಿಕರು ಸಾಯುತ್ತಾರೆ, ಈ ಪತ್ರವನ್ನು ತಮಾಷೆಯಾಗಿ ತೆಗೆದುಕೊಳ್ಳಬೇಡಿ ಎಂದು ಪತ್ರದಲ್ಲಿ ಬೆದರಿಕೆ ಹಾಕಲಾಗಿತ್ತು.
ವಿಮಾನದ ಕಾರ್ಗೊ ಪ್ರದೇಶ ಸ್ಫೋಟಕ ಬಾಂಬ್ ಗಳನ್ನು ಹೊಂದಿದ್ದು ದೆಹಲಿ ವಿಮಾನ ನಿಲ್ದಾಣದಲ್ಲಿ ಇಳಿಸಿದರೆ ಸ್ಫೋಟಗೊಳ್ಳುತ್ತದೆ ಎಂದು ಕೂಡ ಬರೆಯಲಾಗಿತ್ತು. ಸಂದೇಶ ಸಿಕ್ಕಿದ ತಕ್ಷಣ ಬಾಂಬ್ ಬೆದರಿಕೆ ಕಾರ್ಯ ಸಮಿತಿ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಸೇರಿ ತನಿಖಾ ಪ್ರಕ್ರಿಯೆಯನ್ನು ಆರಂಭಿಸಿದರು.
ಬೆದರಿಕೆ ಪತ್ರವನ್ನು ಇಟ್ಟು ಜೆಟ್ ವಿಮಾನ 339 ಅಹ್ಮದಾಬಾದ್ ನಲ್ಲಿ ಬಂದಿಳಿಯಲು ಕಾರಣರಾದ ವ್ಯಕ್ತಿಯನ್ನು ಗುರುತಿಸಲಾಗಿದೆ ಎಂಬ ಮಾಹಿತಿ ನನಗೆ ಬಂದಿದೆ ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಎ. ಗಜಪತಿ ರಾಜು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics