ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್
ನವದೆಹಲಿ: ದೇಶದಾದ್ಯಂತ ಭಾರೀ ಸಂಚಲನ ಮೂಡಿಸಿದ್ದ ಬಹುಕೋಟಿ ವ್ಯಾಪಂ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಸಿಬಿಐ ಮಂಗಳವಾರ ಕ್ಲೀನ್ ಚಿಟ್ ನೀಡಿದೆ.
ವ್ಯಾಪಂ ಹಗರಣಕ್ಕೆ ಸಂಬಂಧಿಸಿದೆ ಸಿಬಿಐ ಆಧಿಕಾರಿಗಳು ಒಟ್ಟು 490 ಮಂದಿ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದು, ಪಟ್ಟಿಯಲ್ಲಿ ಶಿವರಾಜ್ ಸಿಂಗ್ ಅವರ ಹೆಸರನ್ನು ಕೈಬಿಟ್ಟಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ತುಸು ನಿರಾಳ ದೊರಕಿದಂತಾಗಿದೆ.
ಹಗರಣಕ್ಕೆ ಸಂಬಂಧಿಸಿದಂತೆ ವ್ಯಾಪಂ ಕಚೇರಿಯಿಂದ ವಶಪಡಿಸಿಕೊಂಡಿದ್ದ ಹಾರ್ಡ್ ಡಿಸ್ಕ್ ನಲ್ಲಿ ಮುಖ್ಯಮಂತ್ರಿ ಚೌಹಾಣ್ ಹೆಸರಿರಲಿಲ್ಲ ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. ಅಲ್ಲದೆ, ಹಾರ್ಡ್ ಡಿಸ್ಕ್ ನ್ನು ತಿರುಚಲಾಗಿದೆ ಎಂಬ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರ ಹೇಳಿಕೆಯನ್ನು ತಿರಸ್ಕರಿಸಿದೆ.
ವ್ಯಾಪಂ ಕಚೇರಿಯಿಂದ ಈ ಹಿಂದೆ ವಶಪಡಿಸಿಕೊಂಡ 3 ಕಂಪ್ಯೂಟರ್ ಗಳ ಹಾರ್ಡ್ ಡಿಸ್ಕ್ ಗಳನ್ನು ವಿಧಿವಿಜ್ಞಾನ ತಜ್ಞರು ಪರಿಶೀಲಿಸಿದ್ದಾರೆ. ಅದನ್ನು ತಿರುಚಲಾಗಿಲ್ಲ. ಇದ್ದಿದ್ದನ್ನು ಇರುವ ಹಾಗೆಯೇ ನಾವು ಭೋಪಾಲ್ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆಂದು ಸಿಬಿಐ ತಿಳಿಸಿದೆ.
2013ರಲ್ಲಿ ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವಿದ್ದಾಗ ವ್ಯವಸಾಯಿಕ್ ಪರೀಕ್ಷಾ ಮಂಡಲ್/ವ್ಯಾಪಂ ನಡೆಸುವ ಪೂರ್ವ ವೈದ್ಯಕೀಯ ಪರೀಕ್ಷೆಯಲ್ಲಿ ಸುಮಾರು ರೂ.2000 ಕೋಟಿ ಭಾರೀ ಅಕ್ರಮ ನಡೆದಿತ್ತು. ಒಂದು ಪ್ರಶ್ನೆಪತ್ರಿಕೆಯನ್ನು ರೂ.5 ಲಕ್ಷದವರೆಗೆ ವಿದ್ಯಾರ್ಥಿಗಳಿಗೆ ಮಾರಾಟ ಮಾಡಲಾಗಿತ್ತು. ಆಸನ ವ್ಯವಸ್ಥೆ, ಉತ್ತರ ಪತ್ರಿಕೆ ಅದಲು-ಬದಲು ಮಾಡಿ ಭಾರೀ ಅಕ್ರಮ ಎಸಗಲಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು. ಈ ಹಗರಣದಲ್ಲಿ ಶಿವರಾಜ್ ಸಿಂಗ್ ಅವರ ಹೆಸರು ಬಲವಾಗಿ ಕೇಳಿಬಂದಿತ್ತು.