ದೇಶ

ಬಿಹಾರ ಪ್ರವಾಹಕ್ಕೆ ಇಲಿಗಳೇ ಕಾರಣ ಎಂದ ಜಲಸಂಪನ್ಮೂಲ ಸಚಿವರೇ ದೊಡ್ಡ ಹೆಗ್ಗಣ: ಲಾಲು

Lingaraj Badiger
ಪಾಟ್ನಾ: ಬಿಹಾರದಲ್ಲಿ ಈಗ ಇಲಿಗಳು ಭಾರಿ ಸದ್ದು ಮಾಡುತ್ತಿದ್ದು, ಪ್ರವಾಹಕ್ಕೆ ಇಲಿಗಳೇ ಕಾರಣ ಎಂದ ಬಿಹಾರದ ಜಲಸಂಪನ್ಮೂಲ ಸಚಿವ ರಾಜೀವ್ ರಂಜನ್ ಅವರೇ 'ದೊಡ್ಡ ಹೆಗ್ಗಣ' ಎಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ಬಿಹಾರದ ಬೀಕರ ಪ್ರವಾಹದಿಂದಾಗಿ 21 ಜಿಲ್ಲೆಗಳು ನೀರಿನಲ್ಲಿ ಮುಳುಗಿವೆ. ಸುಮಾರು 500ಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದು ಲಕ್ಷಗಟ್ಟಲೆ ಜನರು ನಿರ್ಗತಿಕರಾಗಿದ್ದಾರೆ. ನಿನ್ನೆ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಬಳಿಕ ಮಾತನಾಡಿದ ರಾಜೀವ್ ರಂಜನ್ ಅವರು, ಪ್ರವಾಹಕ್ಕೆ ಪ್ರಮುಖ ಕಾರಣ ಇಲಿಗಳು. 
ಅಣೆಕಟ್ಟಿನ ಸುತ್ತಮುತ್ತಲು ವಾಸಿಸುವ ಜನರು ಆಹಾರ ಧಾನ್ಯಗಳನ್ನು ಅಲ್ಲಿಯೇ ಎಸೆಯುವ ಕಾರಣ ಇಲಿಗಳ ಸಂಖ್ಯೆ ಹೆಚ್ಚುತ್ತಿವೆ. ಈ ಇಲಿಗಳು ಅಣೆಕಟ್ಟುಗಳನ್ನು ಕೊರೆದ ಕಾರಣ ಪ್ರವಾಹ ವುಂಟಾಗಿದೆ ಎಂದು ಹೇಳಿದ್ದರು.
ಅಣೆಕಟ್ಟಿನಲ್ಲಿರುವ ಇಲಿ ಬಿಲಗಳನ್ನು ಪತ್ತೆ ಹಚ್ಚಿ  72 ಗಂಟೆಗಳೊಳಗೆ ಅದನ್ನು ಮುಚ್ಚುವ ಕೆಲಸಗಳನ್ನು ಮಾಡಿದ್ದೇವೆ. ಹೀಗೆ ಮಾಡಿದ್ದರಿಂದ ಕೆಲವೊಂದು ಪ್ರದೇಶಗಳನ್ನು ಪ್ರವಾಹದಿಂದ ರಕ್ಷಿಸುವ ಯತ್ನ ಮಾಡಿದ್ದೇವೆ ಎಂದು ರಂಜನ್ ಅವರು ತಿಳಿಸಿದ್ದಾರೆ. ಇನ್ನು ರಂಜನ್ ಅವರ ಸಿದ್ಧಾಂತವನ್ನು ಬೆಂಬಲಿಸಿದ ಸಣ್ಣ ನೀರಾವರಿ ಸಚಿವ ದಿನೇಶ್ ಚಂದ್ರ ಯಾದವ್ ಅವರು, ಅಣೆಕಟ್ಟುಗಳು ದುರ್ಬಲಗೊಳ್ಳಲು ಇಲಿಗಳು ಪ್ರಮುಖ ಕಾರಣ ಎಂದಿದ್ದಾರೆ.
ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಟ್ಟು ಇಲಿಗಳ ಮೇಲೆ ಆಪಾದನೆ ಮಾಡುತ್ತಿದೆ ಎಂದು ಪ್ರತಿಪಕ್ಷಗಳು ಟೀಕಿಸಿವೆ.
ಕಳೆದ ತಿಂಗಳು ಬಿಹಾರದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಹ ಪೀಡಿತರಿಗೆ ಪರಿಹಾರ ಮತ್ತು ಪುನರ್ವಸತಿಗಾಗಿ 500 ಕೋಟಿ ಬಿಡುಗಡೆ ಮಾಡಿದ್ದರು.
SCROLL FOR NEXT