ಅಹಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಣ್ಣ ಮತ್ತು ಮಧ್ಯಮ ಉದ್ಯಮಕ್ಕೆ ಭಾರೀ ವೆಚ್ಚ ಮಾಡುವ ಮೂಲಕ ಕ್ರೋನಿ ಬಂಡವಾಳಶಾಹಿಗೆ ಉತ್ತೇಜನ ನೀಡುತ್ತಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಸೋಮವಾರ ಆರೋಪಿಸಿದ್ದಾರೆ.
ಸಬರಮತಿ ನದಿ ಮುಂಭಾಗ ಇಂದು ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಗುಜರಾತ್ ನಲ್ಲಿ ರೈತರ ಸಾಲದ ಮೊತ್ತ 36 ಸಾವಿರ ಕೋಟಿ ಇದೆ. ಆದರೆ ನ್ಯಾನೊಗೆ ಶೇ.0.01ರಷ್ಟು ಬಡ್ಡಿಯಲ್ಲಿ 60 ಸಾವಿರ ಕೋಟಿ ರುಪಾಯಿ ಸಾಲ ನೀಡಲಾಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಗುಜರಾತ್ ನಲ್ಲಿ ನೀವು ಯಾವುದಾದರೂ ನಾನೊ ಕಾರು ನೋಡಿದ್ದೀರಾ? ಅದರಿಂದ ಇಲ್ಲಿ ಎಷ್ಟು ಯುವಕರಿಗೆ ಉದ್ಯೋಗ ಸಿಕ್ಕಿದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ಪ್ರಶ್ನಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರ ಕೇವಲ ಕೆಲ ಕಾರ್ಪೋರೇಟ್ ಕಂಪನಿಗಳಿಗಾಗಿ ಕೆಲಸ ಮಾಡುತ್ತಿದೆ. ಪ್ರಧಾನಿ ಮೋದಿಯ ಆರರಿಂದ ಏಳು ಜನ ಕಾರ್ಪೋರೇಟ್ ಸ್ನೇಹಿತರು ಮಾಧ್ಯಮವನ್ನು ನಿಯಂತ್ರಿಸುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಮಂತ್ರಿ ಅಥವಾ ಅಧಿಕಾರಿ ತನ್ನ ಬಂಧುಗಳಿಗೆ ಮಾತ್ರ ಹೆಚ್ಚು ಕಾಂಟ್ರಾಕ್ಟು ಅಥವಾ ಹೆಚ್ಚು ಪರವಾನಗಿ ಸಿಗುವಂತೆ ಮಾಡುವುದು. ಆ ಮೂಲಕ ಅದೇ ಕಾಂಟ್ರಾಕ್ಟು ಅಥವಾ ಪರವಾನಗಿಯನ್ನು ಪಡೆಯಲು ಬಂದಿರಬಹುದಾದ ಸ್ಪರ್ಧೆಗಳನ್ನು ತಪ್ಪಿಸಿ ತನ್ನವರ ಏಳಿಗೆಗೆ ಶ್ರಮಿಸುವುದು. ಇಂತಹದನ್ನು ಪಾಶ್ಚಾತ್ಯ ಅರ್ಥಶಾಸ್ತ್ರಜ್ಞರು ಕ್ರೋನಿ ಕ್ಯಾಪಿಟಲಿಸಂ ಎಂದು ಗುರುತಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics