ನವದೆಹಲಿ: ಶಿಕ್ಷಕರ ದಿನಾಚರಣೆ ನಿಮಿತ್ತ ದೇಶದ ಎಲ್ಲ ಶಿಕ್ಷಕರಿಗೆ ಖ್ಯಾತ ಸರ್ಚ್ ಎಂಜಿನ್ ಸಂಸ್ಥೆ ಗೂಗಲ್ ವಿಶೇಷ ಡೂಡಲ್ ಬಿಡಿಸುವ ಮೂಲಕ ಮಂಗಳವಾರ ಶುಭಾಶಯ ಕೋರಿದೆ.
ಭಾರತ ರತ್ನ ಪುರಸ್ಕೃತ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಪ್ರಯುಕ್ತ ಆಚರಿಸಲಾಗುವ ಶಿಕ್ಷಕರ ದಿನಾಚರಣೆಯನ್ನು ಗೂಗಲ್ ಸಂಸ್ಥೆ ವಿಶೇಷ ಡೂಡಲ್ ಬಿಡಿಸುವ ಮೂಲಕ ಗೌರವಿಸಿದೆ. ಗೂಗಲ್ ನ ಪುಟ್ಟ ಅಕ್ಷರಗಳು ವಿದ್ಯಾರ್ಥಿಗಳಾಗಿರುವಂತೆ ಮತ್ತು ಮಧ್ಯದ ಅಕ್ಷರ ಶಿಕ್ಷಕನಾಗಿರುವಂತೆ ಅನಿಮೇಷನ್ ಮಾಡಿ ಮಕ್ಕಳಿಗೆ ವಿವಿಧ ವಿಚಾರಗಳ ಕುರಿತು ಪಾಠ ಮಾಡುವ ಡೂಡಲ್ ಮನ ಸೆಳೆಯುವಂತಿದೆ.
ಡೂಡಲ್ ಅನ್ನು ಕ್ಲಿಕ್ಕಿಸಿದರೆ ಶಿಕ್ಷಕರ ದಿನಾಚರಣೆಗೆ ಸಂಬಂಧಿಸಿದ ಸುದ್ದಿಗಳು ಹಾಗೂ ವಿಶೇಷ ಲೇಖನಗಳ ಗುಚ್ಛವೇ ತೆರೆದುಕೊಳ್ಳುವಂತೆ ವಿಶೇಷವಾಗಿ ಪುಟ ವಿನ್ಯಾಸ ಮಾಡಲಾಗಿದೆ.
ಪ್ರತೀ ವಿಶೇಷ ದಿನದಂದು ವಿಶೇಷ ಡೂಡಲ್ ಬಿಡಿಸುವ ಮೂಲಕ ಅಂತರ್ಜಾಲ ಶೋಧಿಸುವವರ ಗಮನ ಸೆಳೆಯಲಾಗುತ್ತದೆ. ಡೂಡಲ್ ಗಳ ಮೂಲಕ ಗೂಗಲ್ ಆ ದಿನದ ವಿಶೇಷತೆಯನ್ನು ನೆನಪಿಸುತ್ತದೆ.