ಸೇನಾ ಮುಖ್ಯಸ್ಥ ಬಿಪಿನ್ ರಾವತ್
ನವದೆಹಲಿ: ಚೀನಾ ಈಗಾಗಲೇ ಸೇನಾ ಸನ್ನದ್ಧತೆಗಳನ್ನು ಆರಂಭಿಸಿದ್ದು, ಚೀನಾ ಮತ್ತು ಪಾಕಿಸ್ತಾನದ ಜತೆಗಿನ ಯುದ್ಧದ ಸಾಧ್ಯತೆಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಹೀಗಾಗಿ, ಉಭಯ ರಾಷ್ಟ್ರಗಳ ವಿರುದ್ಧ ಒಮ್ಮೆಲೆ ಯುದ್ಧ ಮಾಡುವುದಕ್ಕೆ ಭಾರತ ಸಿದ್ಧವಿರಬೇಕು ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಬುಧವಾರ ಹೇಳಿದ್ದಾರೆ.
ಭೂಸೇನೆಯ ಯುದ್ಧಗಳ ಕುರಿತ ಸಂಶೋಧನಾ ಕೇಂದ್ರ ನಿನ್ನೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಡೋಕ್ಲಾಮ್ ವಿವಾದ ಸಂಬಂಧ ಮಾತನಾಡಿರುವ ಅವರು, ಉತ್ತರ ಗಡಿ ಭಾಗಗಳಲ್ಲಿರುವ ಪರಿಸ್ಥಿತಿಗಳು ಕಾಲ ಕಳೆಯುತ್ತಿದ್ದಂತೆ ಕ್ರಮೇಣ ದೊಡ್ಡ ಸಂಘರ್ಷವನ್ನು ಎದುರು ಮಾಡಬಹುದು. ಚೀನಾ ಹಾಗೂ ಪಾಕಿಸ್ತಾನ ನಡುವಿನ ಬಿಕ್ಕಟ್ಟುಗಳನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಚೀನಾ ಈಗಾಗಲೇ ಸೇನಾ ಸನ್ನದ್ಧತೆಗಳನ್ನು ಆರಂಭಿಸಿದೆ. ಚೀನಾ ಹಂತ ಹಂತವಾಗಿ ಭಾರತದ ಭೂ ಭಾಗ ಕಬಳಿಸುವುದನ್ನು ಮುಂದುವರೆಸುತ್ತಿದೆ. ಕ್ರಮೇಣ ಚೀನಾ ಭಾರತದ ಸಹನೆಯ ಮಿತಿಯನ್ನು ಪರೀಕ್ಷಿಸಲು ಆರಂಭಿಸುತ್ತದೆ. ಇಂತಹ ಪರಿಸ್ಥಿತಿಗಳನ್ನು ಎದುರಿಸಲು ಭಾರತ ಸಿದ್ಧತೆವಾಗಿರಬೇಕಿದೆ ಎಂದು ಹೇಳಿದ್ದಾರೆ.
ಒಂದು ಕಡೆ ಪಾಕಿಸ್ತಾನ ಭಾರತದ ವಿರುದ್ಧ ಪರೋಕ್ಷ ಯುದ್ಧವನ್ನು ಮುಂದುವರೆಸಿದ್ದರೆ, ಮತ್ತೊಂದೆಡೆ ಚೀನಾ ಭಾರತಕ್ಕೆ ಸೇರಿದ ಪ್ರದೇಶದಲ್ಲಿ ತನ್ನ ಸಾಮರ್ಥ್ಯ ಪ್ರದರ್ಶನ ನಡೆಸುತ್ತಿದೆ. ಇದು ನಮ್ಮ ತಾಳ್ಮೆ ಪರೀಕ್ಷಿಸುವಂಥಹ ನಡೆಯಾಗಿದೆ. ಭಾರತ ಮತ್ತು ಚೀನಾ ಬಿಕ್ಕಟ್ಟಿನಿಂದ ಪಾಕಿಸ್ತಾನ ಅನುಕೂಲ ಪಡೆಯಲು ನೋಡುತ್ತಿದೆ. ಈ ಎಲ್ಲಾ ಬೆಳವಣಿಗೆಗಳು ಮುಂದಿನ ಬೆಳವಣಿಗೆಗಳಿಗೆ ಭಾರತ ಸಿದ್ಧರಿರುವಂತೆ ಮಾಡಿದೆ.
ಪಾಕಿಸ್ತಾನ ಭಾರತದ ವಿರುದ್ಧ ಪರೋಕ್ಷವಾಗಿ ಯುದ್ಧ ಸಾರಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಭಿನ್ನಮತ ರಾಜಿ ಮಾಡಲಾಗದಂಥಹದ್ದು. ಭಾರತದ ವಿರುದ್ಧ ಪಾಕಿಸ್ತಾನ ನಡೆಸುತ್ತಿರುವ ಪರೋಕ್ಷ ಯುದ್ಧವನ್ನು ಇನ್ನೆಷ್ಟು ದಿನಗಳ ಸಹಿಸಲು ಸಾಧ್ಯ. ಪಾಕಿಸ್ತಾನ ಈಗಾಗಲೇ ಮಿತಿ ಮೀರಿ ನಡೆದಿದ್ದು, ಸಂಭಾವ್ಯ ಸಂಘರ್ಷದ ವ್ಯಾಪ್ತಿ ಎಷ್ಟಿರಬಹುದು ಎಂಬುದನ್ನು ಹೇಳವುದು ಕಷ್ಟಸಾಧ್ಯ.ಕೂಡಲೇ ರಾಜಕೀಯ ನಾಯಕರು ಈ ಬಗ್ಗೆ ಗಮನ ಹರಿಸಿ ಚರ್ಚೆ ನಡೆಸಬೇಕಿದೆ.
ಯುದ್ಧ ನಡೆಯುವುದಿಲ್ಲ ಎಂದು ನಂಬುವುದರಿಂದ ಸೇನೆಯ ಆಧುನೀಕರಣ ಸಾಧ್ಯವಿಲ್ಲ. ಈ ರೀತಿಯ ಚಿತಂನೆಗಳು ರಕ್ಷಣಾ ವಲಯಕ್ಕೆ ಅನುದಾನ ಹಂಚಿಕೆಯ ಮೇಲೂ ಪರಿಣಾಮವನ್ನು ಬೀರುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರಗಳು ಅಥವಾ ಅಣ್ವಸ್ತ್ರಶಕ್ತ ರಾಷ್ಟ್ರಗಳು ಯುದ್ಧಕ್ಕೆ ಮುಂದಾಗುವುದಿಲ್ಲ ಎಂಬುದು ಭ್ರಮೆ ಮಾತ್ರ. ಯುದ್ಧ ಎಂಬುದು ಹೆಚ್ಚು ವಾಸ್ತವಕ್ಕೆ ಸಂಬಂಧಿಸಿದ್ದಾಗಿದೆ ಎಂದಿದ್ದಾರೆ.