ಗುರುಗಾಂವ್ ಹತ್ಯೆ ಪ್ರಕರಣ: ಲೈಂಗಿಕ ದೌರ್ಜನ್ಯವೆಸಗಿ ಬಾಲಕನ ಹತ್ಯೆ, ಶಾಲಾ ಬಸ್ ಸಿಬ್ಬಂದಿ ಬಂಧನ
ನವದೆಹಲಿ: ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಗುರುಗಾಂವ್ ಶಾಲಾ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾನ್ ಇಂಟರ್ ನ್ಯಾಷನಲ್ ಶಾಲೆಯ ಬಸ್ ಸಿಬ್ಬಂದಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಶಾಲೆಗೆ ಹೋಗಿದ್ದ 2 ತರಗತಿಯಲ್ಲಿ ಓದುತ್ತಿದ್ದ 7 ವರ್ಷದ ಬಾಲಕನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣ ಸಾಕಷ್ಟು ಸುದ್ದಿಗೆ ಗ್ರಾಸವಾಗಿತ್ತು.
ಬಾಲಕನ ತಂದೆ ವರುಣ್ ಕುಮಾರ್ ಅವರು ಎಂದಿನಂತೆ ನಿನ್ನೆ ಕೂಡ ತಮ್ಮ ಮಗನನ್ನು ಶಾಲೆಗೆ ಬಿಟ್ಟು ಹೋಗಿದ್ದರು. ಶಾಲೆಗೆ ಬಿಟ್ಟು ಹೋದ 15 ನಿಮಿಷಗಳಲ್ಲೇ ಶಾಲೆಯಿಂದ ಕರೆಯೊಂದು ಬಂದಿದೆ. ಶೌಚಾಲಯದಲ್ಲಿ ಮಗು ರಕ್ತಸಿಕ್ತವಾಗಿ ಬಿದ್ದಿದ್ದು, ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ ಎಂದು ಹೇಳಿದ್ದರು ಎಂದು ವರುಣ್ ಹೇಳಿದ್ದಾರೆ.
ಚೂರಿಯಿಂದ ಮಗುವಿನ ಕತ್ತನ್ನು ಸೀಳಲಾಗಿತ್ತು. ತೀವ್ರವಾಗಿ ರಕ್ತಸ್ರಾವವಾದ್ದರಿಂದ ಮಗು ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿತ್ತು ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಶಾಲಾ ಮಕ್ಕಳನ್ನು ವಿಚಾರಿಸಿದ್ದಾರೆ. ಈ ವೇಳೆ ಮಕ್ಕಳು ಶಾಲಾ ಸಿಬ್ಬಂದಿಯಾಗಿದ್ದ ಅಶೋಕ್ ಮೇಲೆ ಸಂಶಯಗಳನ್ನು ವ್ಯಕ್ತಪಡಿಸಿದ್ದಾರೆ. ಪ್ರಕರಣ ಸಂಬಂಧ ಈ ವರೆಗೂ ಪೊಲೀಸರು 10 ಮಂದಿಯನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸಿದ್ದಾರೆ.
ಶಾಲೆಯ ಸಿಬ್ಬಂದಿಯಾಗಿರುವ ಅಶೋಕ್ ಘಮ್ರೋಜ್ ಗ್ರಾಮದ ನಿವಾಸಿಯಾಗಿದ್ದಾರೆ. ಶಾಲಾ ಮಕ್ಕಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಅಶೋಕ್ ನನ್ನು ಬಂಧನಕ್ಕೊಳಪಡಿಸಿ ತೀವ್ರವಾಗಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಅಶೋಕ್ ತಾನೇ ಮಗುವನ್ನು ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಮಗುವಿನ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಹತ್ಯೆ ಮಾಡಿರುವ ಶಂಕೆಗಳು ಮೂಡತೊಡಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸಲು ಹೇಳಿದ್ದಾರೆ.
15 ನಿಮಿಷಗಳ ಹಿಂದಷ್ಟೇ ಮಗುವನ್ನು ಶಾಲೆಗೆ ಬಿಟ್ಟು ಬಂದಿದ್ದೆ. ನನ್ನ ಮಗ ಶಾಲೆಯಲ್ಲಿ ಹತ್ಯೆಗೀಡಾಗಿದ್ದಾನೆ. ಶಾಲೆಗಳಲ್ಲಿಯೇ ಮಕ್ಕಳು ಹತ್ಯೆಯಾಗುತ್ತಿರುವಾಗ ಯಾವ ನಂಬಿಕೆಯ ಮೇಲೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಕು? ಶಾಲೆಯ ಆಡಳಿತ ಮಂಡಳಿ ಮಗುವನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಸೂಕ್ತ ಸಮಯದಲ್ಲಿ ಮಗುವನ್ನು ಆಸ್ಪತ್ರೆಗೆ ಸೇರಿದ್ದೇ ಆಗಿದ್ದರೆ, ಮಗು ಬದುಕುಳಿಯುತ್ತಿತ್ತು ಎಂದು ಬಾಲಕನ ತಂದೆ ಶಾಲೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಲ್ಲಾ ರೀತಿಯ ಆಯಾಮಗಳಲ್ಲೂ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ. ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಶೀಲನೆ ನಡೆಸಲಾಗುತ್ತಿದೆ. ಪ್ರಕಱಣ ಸಂಬಂಧ ಇಬ್ಬರು ಶಂಕಿತರನ್ನು ವಿಚಾರಣೆಗೊಳಪಡಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಗುರುಗಾವೇ ಪೊಲೀಸ್ ವಕ್ತಾರ ರವೀಂದರ್ ಕುಮಾರ್ ಅವರು ತಿಳಿಸಿದ್ದಾರೆ.
ತನಿಖಾ ತಂಡದಲ್ಲಿ ವಿಧಿವಿಜ್ಞಾನದ ತಜ್ಞರು ಕೂಡ ಇದ್ದು, ಈಗಾಗಲೇ ರಕ್ತ ಹಾಗೂ ಬೆಳರಚ್ಚಿನ ಮಾದರಿಗಳನ್ನು ಪಡೆದುಕೊಂಡಿದ್ದಾರೆ. ಹತ್ಯೆಗೆ ಬಳಸಲಾಗಿರುವ ಚಾಕುವನ್ನೂ ವಶಕ್ಕೆ ಪಡೆದುಕೊಂಡಿದ್ದಾರೆಂದು ಹೇಳಿದ್ದಾರೆ.