ಜೈಪುರ: ರಾಜಾಸ್ಥಾನದ ರಾಜಧಾನಿ ಜೈಪುರದಲ್ಲಿ ಪೊಲೀಸರು ಮತ್ತು ಸಾರ್ವಜನಿಕ ಗುಂಪಿನ ನಡುವಣ ಮಾತಿನ ಚಕಮಕಿ ಹಿಂಸಾಚಾರಕ್ಕೆ ತಿರುಗಿ ಘರ್ಷಣೆ ಸಂಭವಿಸಿದೆ. ಘಟನೆಯಲ್ಲಿ ಒಬ್ಬ ಮೃತಪಟ್ಟು, ಪೋಲೀಸ್ ಸಿಬ್ಬಂದಿ ಸೇರಿದಂತೆ 10 ಜನ ಗಾಯಗೊಂಡಿದ್ದಾರೆ.
ಹಿಂಸಾಚಾರ ನಿಯಂತ್ರಿಸಲು ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಉದ್ವಿಗ್ನ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಜೈಪುರದ ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕರ್ಫ್ಯೂ ಹೇರಲಾಗಿದೆ,ಮೊಬೈಲ್ ಹಾಗೂ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಕಾರಣ: ನಗರದ ರಾಮ್ಗಂಜ್ ಎಂಬಲ್ಲಿ ಬೈಕ್ನಲ್ಲಿ ಸಂಚರಿಸುತ್ತಿದ್ದ ದಂಪತಿ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಗುಂಪು ಸೇರಿದ್ದಾರೆ. ಈ ಸಂದರ್ಭ ಪೊಲೀಸರು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ. ಮಾತಿನಚಕಮಕಿ ಹಿಂಸಾಚಾರಕ್ಕೆ ತಿರುಗಿದೆ. ಈ ಮಧ್ಯೆ, ರಾಮ್ಗಂಜ್ ಪೊಲೀಸ್ ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು ಪೊಲೀಸ್ ಜೀಪ್, ಆಂಬುಲೆನ್ಸ್ ಸೇರಿದಂತೆ ಐದು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಪೊಲೀಸರು ಅಶ್ರುವಾಯು, ರಬ್ಬರ್ ಬುಲೆಟ್ಗಳನ್ನು ಪ್ರಯೋಗಿಸಿದರು. ಆದರೂ ಸಂಘರ್ಷ ಹತೋಟಿಗೆ ಬಾರದೇ ಹೋದಾಗ ಪೊಲೀಸರು ಗುಂಡಿನ ದಾಳಿ ನಡೆಸಿದರು ಎಂದು ಜೈಪುರ ಪೊಲೀಸ್ ಆಯುಕ್ತ ಸಂಜಯ್ ಅಗರ್ವಾಲ್ ತಿಳಿಸಿದ್ದಾರೆ.
ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ರಾಜಸ್ತಾನ ಸಶಸ್ತ್ರ ಪಡೆ ಮತ್ತು ಹೋಮ್ಗಾರ್ಡ್ ಯೋಧರನ್ನೂ ನಿಯೋಜಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics