ನವದೆಹಲಿ: ಮುಂಬೈ ದಾಳಿಗಿಂತಲೂ ದೊಡ್ಡ ಪ್ರಮಾಣದಲ್ಲಿ ಭಾರತದಲ್ಲಿ ರಾಸಾಯನಿಕ ದಾಳಿ ನಡೆಸಲು ಉಗ್ರರು ಸಂಚು ನಡೆಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ಭಾನುವಾರ ಎಚ್ಚರಿಕೆ ನೀಡಿದೆ.
ದೇಶದ ಪ್ರಮುಖ ವಿಮಾನ ನಿಲ್ದಾಣ, ರೈಲ್ವೇ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳು ಸೇರಿದಂತೆ ಅತೀ ಹೆಚ್ಚು ಜನರು ಸೇರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಅಪಾಯಕಾರಿ ರಾಸಾಯನಿಕ ಅನಿಲಗಳ ಮೂಲಕ ದಾಳಿ ನಡೆಸಲು ಉಗ್ರರು ಸಂಚು ರೂಪಿಸುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಲ್ಲೂ ಭದ್ರತೆ ಹೆಚ್ಚಿಸುವಂತೆ ಸೂಚನೆ ನೀಡಿದೆ.
ಬಾಂಬ್ ಗಳು ಮತ್ತು ಗುಂಡಿನ ದಾಳಿಗಿಂತಲೂ ರಾಸಾಯನಿಕ ಅನಿಲಗಳು ಹೆಚ್ಚು ಅಪಾಯಕಾರಿಯಾಗಿದ್ದು, ಕಡಿಮೆ ಶ್ರಮದಲ್ಲಿ ಅತೀ ಹೆಚ್ಚು ಹಾನಿ ಮಾಡಬಹುದಾಗಿರುವುದರಿಂದ ಉಗ್ರರು ಈ ಮಾರ್ಗವನ್ನು ಆರಿಸಿಕೊಂಡಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ. ರಾಸಾಯನಿಕ ಅನಿಲಗಳು ಸಾಂಪ್ರದಾಯಿಕ ಸ್ಫೋಟಕಗಳಿಗಿಂತಲೂ ಹೆಚ್ಚು ಹಾನಿಯನ್ನುಂಟು ಮಾಡುವ ಸಾಮರ್ಥ್ಯ ಹೊಂದಿವೆ. ರಾಸಾಯನಿಕ ದಾಳಿಯಲ್ಲಿ ಬಳಸುವಂತಹ ವಸ್ತುಗಳ ಕುರಿತು ಎಚ್ಚರಿಕೆ ವಹಿಸುವಂತೆ ವಿಮಾನ ನಿಲ್ದಾಣಗಳ ಭದ್ರತಾ ಸಿಬ್ಬಂದಿಗೆ ಗೃಹ ಸಚಿವಾಲಯ ಆದೇಶಿಸಿದೆ. ಈ ಸಂಬಂಧ ಗೃಹ ಸಚಿವಾಲಯ ಸೆಪ್ಟೆಂಬರ್ 1 ರಂದೇ ಎಲ್ಲಾ ರಾಜ್ಯಗಳು, ವಿಮಾನಯಾನ ಸಚಿವಾಲಯ ಮತ್ತು ಇತರ ಭದ್ರತಾ ಸಂಸ್ಥೆಗಳಿಗೆ ಪತ್ರ ಬರೆದಿದೆ ಎಂದು ತಿಳಿದುಬಂದಿದೆ.
"ನಮ್ಮ ಸುತ್ತಮುತ್ತ ಲಭ್ಯವಿರುವ ವಸ್ತುಗಳನ್ನು ಬಳಸಿಕೊಂಡು ಅಪಾಯಕಾರಿ ವಿಷಾನಿಲ ಉತ್ಪಾದಿಸುವ ವಸ್ತುಗಳನ್ನು ತಯಾರಿಸುವ ಸಾಧ್ಯತೆ ಇದೆ. ಇದಕ್ಕಾಗಿ ಉಗ್ರರು ಕೆಲವೊಂದು ರಾಸಾಯನಿಕ ಪುಡಿ, ಕೀಟನಾಶಕ, ಅ್ಯಸಿಡ್, ಹಾಗೂ ಕೆಲವೊಂದು ಔಷಧಗಳನ್ನು ಬಳಸಿಕೊಂಡು ರಾಸಾಯನಿಕ ಅಸ್ತ್ರಗಳನ್ನು ತಯಾರಿಸಬಹುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ಆಸ್ಟ್ರೇಲಿಯಾದಲ್ಲಿ ವಿಫಲವಾಗಿತ್ತು ಉಗ್ರರ ಪ್ರಯತ್ನ
ಇನ್ನು ಕಳೆದ ತಿಂಗಳು ಆಸ್ಟ್ರೇಲಿಯಾದಲ್ಲಿ ಉಗ್ರರು ವಿಮಾನದಲ್ಲಿ ಸುಧಾರಿತ ಸ್ಫೋಟಕ ಇಡಲು ಪ್ರಯತ್ನಿಸಿದ್ದರು. ಸಮಯಕ್ಕೆ ಸರಿಯಾಗಿ ಕಾರ್ಯಾಚರಣೆ ನಡೆಸಿದ ಆಸ್ಟ್ರೇಲಿಯಾ ಪೊಲೀಸರು ಉಗ್ರರ ಸಂಚನ್ನು ವಿಫಲಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಗೃಹ ಸಚಿವಾಲಯ ಸಹ ದೇಶಾದ್ಯಂತ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos