ದೇಶ

ನಾನು ನಿಜವಾದ ಜೆಡಿಯು, ಅದನ್ನು ಸಾಬೀತು ಮಾಡುತ್ತೇನೆ: ಶರದ್ ಯಾದವ್

Lingaraj Badiger
ನವದೆಹಲಿ: ನಾನು ನಿಜವಾದ ಜೆಡಿಯು, ಅದನ್ನು ಶೀಘ್ರದಲ್ಲೇ ಸಾಬೀತು ಮಾಡುತ್ತೇನೆ ಎಂದು ಜೆಡಿಯು ಬಂಡಾಯ ನಾಯಕ ಶರದ್ ಯಾದವ್ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗೆ ಬುಧವಾರ ತಿರುಗೇಟು ನೀಡಿದ್ದಾರೆ.
ಇಂದು ಬೆಳಗ್ಗೆಯಷ್ಟೇ ರಾಜಕೀಯ ಅಸ್ತಿತ್ವಕ್ಕಾಗಿ ಆರ್ ಜೆಡಿ ಸೇರುವಂತೆ ಜೆಡಿಯು ವಕ್ತಾರ ನೀರಜ್ ಕುಮಾರ್ ಅವರು ಶರದ್ ಯಾದವ್ ಅವರಿಗೆ ಸಲಹೆ ನೀಡಿದ್ದರು. ಈ ಕುರಿತು ವರದಿಗಾರರಿಗೆ ಪ್ರತಿಕ್ರಿಯಿಸಿದ ಶರದ್ ಯಾದವ್ ಅವರು, ನಾವು ನಿಜವಾದ ಜೆಡಿಯು ಮತ್ತು ಮುಂದಿನ ದಿನಗಳಲ್ಲಿ ಅದನ್ನು ಸಾಬೀತು ಮಾಡುತ್ತೇವೆ ಎಂದಿದ್ದಾರೆ.
ಅಕ್ಬೋಬರ್ 8ರಂದು ದೆಹಲಿಯಲ್ಲಿ ಜೆಡಿಯು ರಾಷ್ಟ್ರೀಯ ಕಾರ್ಯಕಾರಣಿ ಸಭೆ ಕರೆಯಲಾಗಿದ್ದು, ಅಂದು ಮುಂದಿನ ಹೋರಾಟದ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೆ ನಮ್ಮದು ನಿಜವಾದ ಜೆಡಿಯು ಎಂದು ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ತಮ್ಮ ವಕೀಲರು ಪ್ರತಿಕ್ರಿಯೆ ಸಲ್ಲಿಸಲಿದ್ದಾರೆ ಎಂದಿದ್ದಾರೆ.
ಜೆಡಿಯು ಪಕ್ಷದ ಚಿಹ್ನೆ ತಮಗೆ ಸೇರಿದ್ದು ಎಂದು ನಾವು ಸಲ್ಲಿಸಿದ ಅರ್ಜಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿಲ್ಲ. ನಮ್ಮ ವಕೀಲರು ಅದನ್ನು ನೋಡಿಕೊಳ್ಳುತ್ತಿದ್ದು, ಸೂಕ್ತ ಸಂದರ್ಭದಲ್ಲಿ ಪ್ರತಿಕ್ರಿಯೆ ಸಲ್ಲಿಸುವುದಾಗಿ ಶರದ್ ಯಾದವ್ ಅವರು ತಿಳಿಸಿದ್ದಾರೆ.
ಶರದ್ ಯಾದವ್ ಯಾವುದೇ ವಿಳಂಬ ಮಾಡದೇ ಆರ್ ಜೆಡಿ ಸೇರಬೇಕು ಮತ್ತು ಪಕ್ಷದ ಲ್ಯಾಟೀನ್ ಚಿಹ್ನೆಯನ್ನು ನಮ್ಮದೆಂದು ಒಪ್ಪಿಕೊಳ್ಳಬೇಕು ಎಂದು ನೀರಜ್ ಕುಮಾರ್ ಅವರ ಸಲಹೆ ನೀಡಿದ್ದರು.
SCROLL FOR NEXT