ದೇಶ

ಅಲ್ವಾರ್ ಹತ್ಯೆ ಪ್ರಕರಣ: 6 ಗೋ ರಕ್ಷಕರಿಗೆ ಕ್ಲೀನ್‌ ಚಿಟ್‌ ನೀಡಿದ ರಾಜಸ್ತಾನ ಪೊಲೀಸರು

Lingaraj Badiger
ಅಲ್ವಾರ್: ಹೈನುಗಾರಿಕೆ ರೈತ ಪೆಹ್ಲೂ ಖಾನ್(55) ಹತ್ಯೆ ಪ್ರಕರಣದ ಆರೋಪಿಗಳಾದ ಆರು ಗೋ ರಕ್ಷಕರಿಗೆ ಕ್ಲೀನ್ ಚಿಟ್ ನೀಡುವ ಮೂಲಕ ಪ್ರಕರಣವನ್ನು ಮುಚ್ಚಿಹಾಕಲು ಮುಂದಾಗಿರುವ ರಾಜಸ್ತಾನ ಸರ್ಕಾರದ ನಿರ್ಧಾರದ ವಿರುದ್ಧ ಹಲವು ಕಾರ್ಯಕರ್ತರು ಗುರುವಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೆಹ್ಲೂ ಖಾನ್ ತನ್ನ ಇಬ್ಬರು ಮಕ್ಕಳೊಂದಿಗೆ ಜೈಪುರದ ಜಾನುವಾರು ಸಂತೆಯಲ್ಲಿ ಹಸುಗಳನ್ನು ಖರಿದೀಸಿ ಹರಿಯಾಣದ ಸ್ವಗ್ರಾಮ ನುಹ್ ಗೆ ಸಾಗಿಸುತ್ತಿದ್ದ ವೇಳೆ ಗೋ ರಕ್ಷಕರು ಅವರ ಮೇಲೆ ದಾಳಿ ನಡೆಸಿದ್ದರು. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪೆಹ್ಲೂ ಖಾನ್ ಅವರು ಎರಡು ದಿನಗಳ ಬಳಿಕ ಮೃತಪಟ್ಟಿದ್ದರು. ಆದರೆ ಸಾಯುವ ಮುನ್ನ ತಮ್ಮ ಮೇಲೆ ದಾಳಿ ಮಾಡಿದ ಆರು ಗೋರಕ್ಷಕರ ಹೆಸರು ಹೇಳಿದ್ದರು. ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ ರಾಜಸ್ತಾನ ಪೊಲೀಸರು ಈಗ ತನಿಖೆ ಪೂರ್ಣಗೊಂಡಿದೆ ಎಂದು ಹೇಳಿದ್ದಾರೆ.
ಪೆಹ್ಲೂ ಖಾನ್ ಹೆಸರಿಸಿದ್ದ ಆರು ಆರೋಪಿಗಳಿಗೂ ರಾಜಸ್ತಾನ ಪೊಲೀಸರು ಕ್ಲೀನ್‌ ಚಿಟ್‌ ನೀಡಿದ್ದಾರೆ. ಇವರಲ್ಲಿ ಮೂವರು ಹಿಂದೂ ಪರಿವಾರದ  ಜತೆ ಗುರುತಿಸಿಕೊಂಡಿದ್ದರು ಎಂದು ವರದಿ ಮಾಡಲಾಗಿದೆ.
ಆರೋಪಿಗಳ ಮೊಬೈಲ್‌ ಸಂಖ್ಯೆ ಹಾಗೂ ಘಟನೆ ನಡೆದ ಸ್ಥಳದಲ್ಲಿನ ಮೊಬೈಲ್‌ ಟವರ್‌ ಮತ್ತು ಮೊಬೈಲ್‌ ವಿಡಿಯೊ ಪರಿಶೀಲಿಸಲಾಗಿದ್ದು ಇವುಗಳಲ್ಲಿ ಬಲವಾದ ಸಾಕ್ಷ್ಯ ಸಿಗದ ಕಾರಣ ಆರೋಪಿಗಳಿಗೆ ಕ್ಲೀನ್‌ ಚಿಟ್‌ ನೀಡಲಾಗಿದೆ ಎಂದು ಪೊಲೀಸ್‌ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.
ಈ  ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನು ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು ಅವರನ್ನು ಬಂಧಿಸಿದ ಬಳಿಕ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
SCROLL FOR NEXT