ದೇಶ

ಬಿಎಸ್ಪಿ ನಾಯಕನ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಸ್ವಯಂ ಘೋಷಿತ ದೇವಮಾನವನ ಬಂಧನ

Lingaraj Badiger
ಗಾಜಿಯಾಬಾದ್: 2013ರಲ್ಲಿ ನಡೆದ ಬಿಎಸ್ಪಿ ನಾಯಕ ದೀಪಕ್ ಭಾರದ್ವಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಸ್ವಯಂ ಘೋಷಿತ ದೇವಮಾನವನನ್ನು ಉತ್ತರ ಪ್ರದೇಶದಲ್ಲಿ ಗಾಜಿಯಾಬಾದ್ ನಲ್ಲಿ ಬಂಧಿಸಿರುವುದಾಗಿ ಪೊಲೀಸರು ಶನಿವಾರ ತಿಳಿಸಿದ್ದಾರೆ.
ನಿನ್ನೆ ರಾತ್ರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಕಾಶ್ ತೋಮರ್ ನೇತೃತ್ವದ ತಂಡ ಬಿಎಸ್ಪಿ ನಾಯಕನ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇಲೆ ಮಾಚೇಂದ್ರ ನಾಥ್ ಅಲಿಯಾಸ್ ಬಾಬಾ ಪ್ರತಿಭಾನಂದ್ ಅವರನ್ನು ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದೆ ಎಂದು ಗಾಜಿಯಾದ್ ಎಸ್ಎಸ್ ಪಿ ಎಚ್ ಎನ್ ಸಿಂಗ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಸ್ವಯಂ ಘೋಷಿತ ದೇವಮಾನವ ಪ್ರತಿಭಾನಂದ್ ಕುರಿತು ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಬಾಬಾನಿಂದ ಎ.32 ಬೋರ್ ಪಿಸ್ತೂಲ್ ಹಾಗೂ ಕಾರ್ಟಿಟ್ರಿಡ್ಜ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಿಂಗ್ ಹೇಳಿದ್ದಾರೆ. ಅಲ್ಲದೆ ವಿಚಾರಣೆ ವೇಳೆ ಆರೋಪಿ ಬಾಬಾ ತಪ್ಪೊಪ್ಪಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಮಾರ್ಚ್ 26, 2013ರಲ್ಲಿ ನಿತೇಶ್ ಕುಂಜ್ ಫಾರ್ಮ್ ಹೌಸ್ ಬಳಿ ಬಿಎಸ್ಪಿ ನಾಯಕ ಭಾರದ್ವಜ್ ಅವರನ್ನು ಪ್ರತಿಭಾನಂದ್ ಕಾರು ಚಾಲಕ ಪುರುಷೋತ್ತಮಾನಂದ್ ರಾಣಾ ಹಾಗೂ ಇತರರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
SCROLL FOR NEXT