ಚೆನ್ನೈ: ರಾಜಕೀಯಕ್ಕೆ ಪಾದಾರ್ಪಣೆ ಮಾಡುವುದಾಗಿ ಅಧಿಕೃತವಾಗಿ ಘೋಷಿಸಿರುವ ನಟ ಕಮಲ್ ಹಾಸನ್ ಅವರು, ಒಂದು ವೇಳೆ ರಜನಿಕಾಂತ್ ಅವರು ರಾಜಕೀಯಕ್ಕೆ ಪ್ರವೇಶಿಸಿದರೂ ಅವರ ಜೊತೆಗೆ ಕೆಲಸ ಮಾಡಲು ನಾನು ಸಿದ್ಧನಿದ್ದೇನೆಂದು ಶುಕ್ರವಾರ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಚಿತ್ರರಂಗದಲ್ಲಿ ನಾವು ಎದುರಾಳಿ ಆದರೂ, ಮಹತ್ವದ ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದೆವು. ಅದು ರಾಜಕೀಯಕ್ಕೂ ಅನ್ವಯವಾಗಲಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ತಮಿಳುನಾಡು ಶಾಸಕರ ರೆಸಾರ್ಟ್ ವಾಸದ ವಿರುದ್ಧ ಕಿಡಿಕಾಡಿರುವ ಅವರು, ಜನ ಪ್ರತಿನಿಧಿಗಳಾಗಿರುವವರು ಸಹ ಕೆಲಸ ನಿರ್ವಹಿಸದಿದ್ದರೆ ವೇತನವಿಲ್ಲ (ನೋ ವರ್ಕ್, ನೋ ಪೇ) ಎಂಬ ನಿಯಮದ ವ್ಯಾಪ್ತಿಗೊಳಪಡಬೇಕು. ಇದು ಕೇವಲ ಸರ್ಕಾರದ ನೌಕರರಿಗೆ ಮಾತ್ರವೇ ಅನ್ವಯಿಸುತ್ತದೆಯೇ? ಅವರು ರೆಸಾರ್ಟ್ ರಾಜಕಾರಣದಲ್ಲೇ ಕಾಲ ಕಳೆಯುತ್ತಾರಲ್ಲ ಎಂದು ತಿಳಿಸಿದ್ದಾರೆ.