ದೇಶ

ಹಮೀದ್ ಅನ್ಸಾರಿ ಪತ್ನಿ ನಡೆಸುವ ಅಲಿಗಢ್ ಮದ್ರಾಸಾದ ಕುಡಿಯುವ ನೀರಿಗೆ ಇಲಿ ಪಾಷಾಣ ಮಿಕ್ಸ್?

Lingaraj Badiger
ನವದೆಹಲಿ: ಮಾಜಿ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರ ಪತ್ನಿ ಸಲ್ಮಾ ಅನ್ಸಾರಿ ಅವರು ನಡೆಸುವ ಅಲಿಘಡದ ಚಾಚಾ ನೆಹರೂ ಮದ್ರಸಾದ ಕುಡಿಯುವ ನೀರಿಗೆ ಕೆಲವು ದುಷ್ಕರ್ಮಿಗಳು ಇಲಿ ಪಾಷಾಣ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಸಲ್ಮಾ ಅನ್ಸಾರಿ ನಡೆಸುತ್ತಿರುವ ಅಲ್ ನೂರ್ ಚಾರಿಟೇಬಲ್ ಸಂಸ್ಥೆಯ ಈ ಮದ್ರಸಾದಲ್ಲಿ ಸುಮಾರು 4000 ಕ್ಕೂ ಹೆಚ್ಚು ಮಕ್ಕಳಿದ್ದು, ಅಪರಿಚಿತ ವ್ಯಕ್ತಿಗಳು ವಿಷ ಬೆರೆಸುವುದನ್ನು ವಿದ್ಯಾರ್ಥಿಯೊಬ್ಬರು ನೋಡಿ ವಾರ್ಡನ್ ಗೆ ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 328 ಮತ್ತು ಐಪಿಸಿ ಸೆಕ್ಷನ್ 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.
ಮಾಹಿತಿ ತಿಳಿದ ತಕ್ಷಣ ನೀರಿನ ಸಂಪರ್ಕವನ್ನು ಸ್ಥಗಿತಗೊಳಿಸಿದ್ದು, ಹಾಗೂ ನೀರಿನ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನೆಯ ನಂತರ ಸಂಸ್ಥೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸೂಚಿಸಿದ್ದೇವೆ ಎಂದು ಅಲಿಘಡ್ ಎಸ್‍ಪಿ ರಾಜೇಶ್ ಪಾಂಡೆ ತಿಳಿಸಿದ್ದಾರೆ.
ಇನ್ನು ಈ ಬಗ್ಗೆ ಎಎನ್ ಐಗೆ ಪ್ರತಿಕ್ರಿಯಿಸಿರುವ ಸಲ್ಮಾ, ಹಾಸ್ಟೆಲ್‍ನಲ್ಲಿರುವ ವಿದ್ಯಾರ್ಥಿಯೊಬ್ಬ ಬಾಟಲ್ ಗೆ ನೀರು ತುಂಬಲು ಹೋಗಿದ್ದ ವೇಳೆ ದುಷ್ಕರ್ಮಿಗಳಿಬ್ಬರು ಟ್ಯಾಂಕ್ ಗೆ ಏನೋ ಬೆರೆಸುತ್ತಿರುವುದನ್ನು ಗಮನಿಸಿದ್ದಾನೆ. ಏನು ಹಾಕುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾಗ ಅವರು ತಮಗೆ ಬೆದರಿಕೆ ಹಾಕಿ, ಬಾಯಿ ಬಿಟ್ಟರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ ನೀಡಿ ತಪ್ಪಿಸಿಕೊಂಡಿದ್ದಾರೆ. ಕೂಡಲೇ ವಿದ್ಯಾರ್ಥಿ ವಿಷಯವನ್ನು ವಾರ್ಡನ್ ಗಮನಕ್ಕೆ ತಂದಿದ್ದಾರೆ ಎಂದು ವಿವರಿಸಿದ್ದಾರೆ. ಅಲ್ಲದೆ ಸ್ಥಳದಲ್ಲಿ ಹಲವು ಇಲಿ ಪಾಷಾಣದ ಮಾತ್ರೆಗಳು ಪತ್ತೆಯಾಗಿರುವುದಾಗಿ ಅವರು ತಿಳಿಸಿದ್ದಾರೆ.
SCROLL FOR NEXT