ದೇಶ

ಸ್ಥಗಿತಗೊಂಡಿದ್ದ ರಿಯಾನ್ ಶಾಲೆ ಪುನಾರಂಭ: ಸಾಕ್ಷ್ಯಾಧಾರ ನಾಶ ಕುರಿತು ವಿದ್ಯಾರ್ಥಿ ತಂದೆ ಆತಂಕ

Manjula VN
ನವದೆಹಲಿ: 7 ವರ್ಷದ ಬಾಲಕನ ಹತ್ಯೆ ಬಳಿಕ ಸ್ಥಗಿತಗೊಂಡಿದ್ದ ರಿಯಾನ್ ಇಂಟರ್ ನ್ಯಾಷನಲ್ ಶಾಲೆ ಸೋಮವಾರದಿಂದ ಪುನರಾರಂಭಗೊಂಡಿದ್ದು, ಸಾಕ್ಷ್ಯಾಧಾರ ನಾಶವಾಗುವ ಕುರಿತು ಹತ್ಯೆಯಾದ ವಿದ್ಯಾರ್ಥಿ ಪ್ರದ್ಯುಮನ್ ಠಾಕೂರ್ ತಂದೆ ಆಂತಕ ವ್ಯಕ್ತಪಡಿಸಿದ್ದಾರೆ.
ಭದ್ರತಾ ಕ್ರಮಗಳನ್ನು ಕೈಗೊಳ್ಳದೆಯೇ ಮತ್ತೆ ಶಾಲೆ ಆರಂಭಗೊಂಡಿದ್ದು, ಉಳಿದ ಮಕ್ಕಳ ಜೀವಕ್ಕೂ ಅಪಾಯ ಎದುರಾಗಲಿದೆ. ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ತನಿಖೆ ಆರಂಭಿಸುವವರೆಗೂ ಶಾಲೆ ಆರಂಭಗೊಳ್ಳಬಾರದು ಎಂದು ಪ್ರದ್ಯುಮನ್ ತಂದೆ ವರುಣ್ ಚಂದ್ರ ಠಾಕೂರ್ ಅವರು ಹೇಳಿದ್ದಾರೆ. 
ಶಾಲೆ ಪುನರಾಂಭಗೊಂಡರೆ ಪ್ರಕರಣ ಕುರಿತ ಸಾಕ್ಷ್ಯಾಧಾರಗಳು ನಾಶವಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಹೀಗಾಗಿ ಸಿಬಿಐ ಅಧಿಕಾರಿಗಳು ತನಿಖೆ ಆರಂಭ ಮಾಡವವರೆಗೂ ಶಾಲೆ ಪುನಾರಂಭಗೊಳ್ಳಬಾರದು ಎಂದು ಆಗ್ರಹಿಸಿದ್ದಾರೆ. 
ಸೆ.8 ರಂದು ರಿಯಾನ್ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಪ್ರದ್ಯುಮನ್ ಠಾಕೂರ್ ಎಂಬ ಬಾಲಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರದ್ಯುಮನ್ ಕತ್ತು ಸೀಳಿದ್ದ ದುಷ್ಕರ್ಮಿಗಳು ಶಾಲೆಯ ಶೌಚಾಲಯದಲ್ಲಿ ದೇಹವನ್ನು ಬಿಸಾಡಿದ್ದರು. 
ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕನನ್ನು ನೋಡಿದ್ದ ವಿದ್ಯಾರ್ಥಿಗಳು ಶಿಕ್ಷಕರಿಗೆ ಮಾಹಿತಿ ನೀಡಿದ್ದರು. ಬಳಿಕ ಶಾಲಾ ಆಡಳಿತ ಮಂಡಳಿ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದರು, ಆದರೆ, ವೈದ್ಯರು ಬಾಲಕ ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು. 
ಪ್ರಕರಣಕ್ಕೆ ಬಾಲಕನ ಪೋಷಕರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಶಾಲಾ ಆಡಳಿತ ಮಂಡಳಿಯ ವಿರುದ್ಧ ತೀವ್ರವಾಗಿ ಪ್ರತಿಭಟಿಸಿದ್ದರು. ನಿನ್ನೆಯಷ್ಟೇ ಪ್ರಕರಣವನ್ನು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಸಿಬಿಐ ತನಿಖೆಗೆ ಆದೇಶಿಸಿದ್ದರು. 
SCROLL FOR NEXT