ಕದ್ದಿದ್ದ ಪರ್ಸ್ ನಲ್ಲಿ ತಾಯಿಯ ಫೋಟೊ, ಪರ್ಸ್ ನ್ನು ಮಾಲಿಕನಿಗೆ ವಾಪಸ್ ನೀಡಿದ ಕಳ್ಳ!
ಭೋಪಾಲ್: ತಾನು ಕದ್ದಿದ್ದ ಪರ್ಸ್ ನಲ್ಲಿ ತಾಯಿಯ ಫೋಟೋ ಇರುವುದನ್ನು ಗಮನಿಸಿದ ಕಳ್ಳನೊಬ್ಬ ಆ ಪರ್ಸ್ ನಲ್ಲಿದ್ದ ಹಣವನ್ನು ಬಿಟ್ಟು ಉಳಿದೆಲ್ಲಾ ವಸ್ತುವನ್ನು ಮಾಲಿಕನಿಗೆ ಒಪ್ಪಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಮಧ್ಯಪ್ರದೇಶದ ಮೊಹಮ್ಮದ್ ಅಲ್ಸಾಮ್ ಜುಲೈ 25 ರಂದು ಪತ್ನಿಯ ಚಿಕಿತ್ಸೆಗಾಗಿ ದೆಹಲಿಗೆ ತೆರಳುತ್ತಿದ್ದಾಗ ಅವರ ಪರ್ಸ್ ಕಳುವಾಗಿತ್ತು. ಈ ಬಗ್ಗೆ ಸರ್ದಾರ್ ಬಝಾರ್ ಪೊಲೀಸರಿಗೆ ದೂರನ್ನೂ ನೀಡಿದ್ದರು. ಆದರೆ ಅಚ್ಚರಿಯ ರೀತಿಯಲ್ಲಿ ಕಳೆದ ವಾರ ಪರ್ಸ್ ಹಾಗೂ ಪರ್ಸ್ ನಲ್ಲಿದ್ದ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಚಾಲನಾ ಪರವಾನಗಿ ಸೇರಿದಂತೆ ಮಹತ್ವದ ದಾಖಲೆಗಳು ಅವರ ಮನೆಗೆ ಕೊರಿಯರ್ ಮೂಲಕ ಬಂದಿದೆ. ಆದರೆ ಅದರಲ್ಲಿದ್ದ 1,200 ರೂಪಾಯಿಗಳಷ್ಟು ಹಣ ಮಾತ್ರ ಕಳುವಾಗಿದೆ.
ಪರ್ಸ್ ಕಳ್ಳತನ ಮಾಡಿದ್ದ ವ್ಯಕ್ತಿ ಅದರಲ್ಲಿ ತನ್ನ ನಂಬರ್ ನ್ನು ನೀಡಿ ಕೊರಿಯರ್ ಮಾಡಿದ್ದ. ಫೋನ್ ಮಾಡಿದಾಗ 1,200 ರೂಪಾಯಿಗಳು ತನಗೆ ಅಗತ್ಯವಿತ್ತಾದ್ದರಿಂದ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾನೆ. ಉಳಿದ ದಾಖಲೆಗಳನ್ನೇಕೆ ಕಳಿಸಿದೆ ಎಂದು ಕೇಳಿದರೆ ನಿಮ್ಮ ಪರ್ಸ್ ನಲ್ಲಿ ನಿಮ್ಮ ತಾಯಿಯ ಫೋಟೊ ಇತ್ತು ಆದ್ದರಿಂದ ಪರ್ಸ್ ನ್ನು ವಾಪಸ್ ಕಳಿಸಿದೆ, ತಾನು ತನ್ನ ತಾಯಿಯನ್ನು ಅತ್ಯಂತ ಹೆಚ್ಚು ಪ್ರೀತಿಸುತ್ತೇನೆ, ಹಾಗೆಯೇ ನೀವು ಪ್ರೀತಿಸುತ್ತೀರಿ ಎಂದುಕೊಂಡೆ ಎಂಬ ಉತ್ತರ ನೀಡಿದ್ದಾನೆ.