ದೇಶ

ತಿರುಪತಿ ಲಡ್ಡುಗೆ ಕೊನೆಗೂ ಸಿಕ್ತು ಆಹಾರ ಸುರಕ್ಷತಾ ಪರವಾನಗಿ!

Shilpa D
ತಿರುಪತಿ: ತಿರುಪತಿ -ತಿರುಮಲ ದೇವಾಲಯದಲ್ಲಿ ಪ್ರಸಾದ ರೂಪದಲ್ಲಿ ತಯಾರಿಸುವ ಲಡ್ಡು ಗೆ 'ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ'ಯಡಿ ಪರವಾನಗಿ ನೀಡಲಾಗಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎಐ) ಚೆನ್ನೈನ ಕೇಂದ್ರೀಯ ಪರವಾನಗಿ ಘಟಕವು  ಟಿಟಿಡಿ ಟ್ರಸ್ಟ್‌ಗೆ ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ ಪರವಾನಗಿ ನೀಡಿದೆ. ಇದಕ್ಕಾಗಿ ಟಿಟಿಡಿ ರು. 7,500 ಪರವಾನಗಿ ಶುಲ್ಕ ಪಾವತಿಸಿದೆ. 
ಆಹಾರ ಸುರಕ್ಷತೆ, ಗುಣಮಟ್ಟ ನಿಯಮಗಳನ್ನು ಪಾಲಿಸದೆಯೇ ತಿರುಪತಿ ಲಡ್ಡು ತಯಾರಿಸಲಾಗುತ್ತಿದೆ ಎಂದು ಬೆಂಗಳೂರಿನ ಮಾಹಿತಿ ಹಕ್ಕು ಕಾರ್ಯಕರ್ತ ಟಿ.ನರಸಿಂಹ ಮೂರ್ತಿ ಅವರು ಪ್ರಾಧಿಕಾರಕ್ಕೆ ದೂರು ನೀಡಿದ್ದರು.
ಭಕ್ತರಿಗೆ ಪವಿತ್ರ ಪ್ರಸಾದದ ರೂಪದಲ್ಲಿ ನೀಡುವ ಲಡ್ಡು ‘ಆಹಾರ’ ವ್ಯಾಖ್ಯಾನದಡಿ ಬರುವುದಿಲ್ಲ. ಲಡ್ಡನ್ನು ಉಚಿತವಾಗಿ ಹಾಗೂ ಕೆಲವೊಮ್ಮೆ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತದೆ ಎಂದು ಟಿಟಿಡಿ ಇಓ ಡಿ ಸಾಂಬಶಿವರಾವ್ ಎಫ್ಎಸ್ ಎಸ್ ಎಐ ಗೆ ಲಿಖಿತ ಪ್ರತಿಕ್ರಿಯೆ ನೀಡಿದ್ದರು. 
ಈ ವಾದ ತಳ್ಳಿಹಾಕಿದ್ದ ಎಫ್‌ಎಸ್‌ಎಸ್‌ಎಐ  ನಿರ್ದೇಶಕರು, ‘ಲಡ್ಡು ತಯಾರಿಸಲು ಕಾಯ್ದೆಯಡಿ ಪಾಲಿಸಬೇಕಾದ ಎಲ್ಲ ಸುರಕ್ಷತಾ ಕ್ರಮಗಳನ್ನು ಟಿಟಿಡಿ ಟ್ರಸ್ಟ್‌ ಕೂಡಾ ಅನುಸರಿಸಬೇಕು’ ಎಂದು ಸ್ಪಷ್ಟಪಡಿಸಿದ್ದರು. ನಿಯಮ ಪಾಲಿಸದ ಟಿಟಿಡಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಂಧ್ರಪ್ರದೇಶದ ಆಹಾರ ಸುರಕ್ಷತಾ ಆಯುಕ್ತರಿಗೆ ಸೂಚಿಸಿದ್ದರು.
ಮಾನವ ಸೇವನೆ ಸಲುವಾಗಿ ಸಂಪೂರ್ಣ ಸಂಸ್ಕರಣೆಗೆ ಒಳಪಡಿಸಿ, ಆಂಶಿಕವಾಗಿ ಸಂಸ್ಕರಣೆಗೆ ಒಳಪಡಿಸಿ, ಸಂಸ್ಕರಣೆಗೆ ಒಳಪಡಿಸದೆ ತಯಾರಿಸುವ ಯಾವುದೇ ಪದಾರ್ಥವನ್ನು (ಔಷಧ, ಸೌಂದರ್ಯವರ್ಧಕ, ಅಮಲು ಪದಾರ್ಥ, ವಸ್ತುಗಳನ್ನು ಹೊರತಾಗಿ) ಆಹಾರ ಎಂದು ಪರಿಗಣಿಸಬಹುದು ಎಂದು ಎಫ್ ಎಸ್ ಎಸ್ಎಐ ತಿಳಿಸಿತ್ತು. 
ಕೂಡಲೇ ಕ್ರಮ ಕೈಗೊಂಡು, ದೇವಾಲಯದ ಎಲ್ಲಾ ವಿಭಾಗಗಳಲ್ಲೂ ತನಿಖೆ ನಡೆಸಿ ವರದಿ ತಯಾರಿಸಲಾಗುವುದು, ಯಾವುದೇ ಸರ್ಕಾರಿ ಸಂಸ್ಥೆಗಳ ತನಿಖೆ ಅಗತ್ಯವಿಲ್ಲ ಎಂದು ದೇವಾಲಯದ ಸಿಬ್ಬಂದಿ ಮತ್ತು ಅರ್ಚಕರು ತಿಳಿಸಿದ್ದಾರೆ.
SCROLL FOR NEXT