ಭೋಪಾಲ್: ಸ್ಟೂಡೆಂಟ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ(ಸಿಮಿ) ಸಂಘಟನೆಯ 8 ಮಂದಿ ಶಂಕಿತ ಉಗ್ರರ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಆಯೋಗವು ಮಧ್ಯ ಪ್ರದೇಶ ಪೊಲೀಸ್ ಇಲಾಖೆಗೆ ಕ್ಲೀನ್ ಚಿಟ್ ನೀಡಿದೆ.
ಕಳೆದ 2016ರ ಅಕ್ಟೋಬರ್ 30ರ ರಾತ್ರಿ ಭೋಪಾಲ್ ಸೆಂಟ್ರಲ್ ಜೈಲಿನಲ್ಲಿದ್ದ ಶಂಕಿತ ಸಿಮಿ ಕಾರ್ಯಕರ್ತರು ಜೈಲಿನ ಓರ್ಪ ಸಿಬ್ಬಂದಿಯನ್ನು ಕೊಂದು ತಪ್ಪಿಸಿಕೊಂಡಿದ್ದರು. ವಿಚಾರ ತಿಳಿಯುತ್ತಿದ್ದಂತೆಯೇ ಕಾರ್ಯಾಚರಣೆ ನಡೆಸಿದ್ದ ಭೋಪಾಲ್ ಪೊಲೀಸರು ಮಾರನೆ ದಿನ ಭೋಪಾಲ್ ಹೊರವಲಯದಲ್ಲಿ ಕಾರ್ಯಾಚರಣೆ ನಡೆಸಿ ತಪ್ಪಿಸಿಕೊಂಡಿದ್ದ ಎಲ್ಲ 8 ಮಂದಿ ಶಂಕಿತ ಉಗ್ರರನ್ನೂ ಎನ್ ಕೌಂಟರ್ ನಲ್ಲಿ ಕೊಂದು ಹಾಕಿದ್ದರು. ಈ ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದ ವಿಡಿಯೋಗಳು ಇದನ್ನು ನಕಲಿ ಎನ್ ಕೌಂಟರ್ ಎಂದು ಬಿಂಬಿಸತೊಡಗಿದ್ದವು.
ಇದರಿಂದ ಮುಜುಗರಕ್ಕೀಡಾಗಿದ್ದ ಮಧ್ಯ ಪ್ರದೇಶ ಸರ್ಕಾರ ಪ್ರಕರಣ ಸಂಬಂಧ ನಿವೃತ್ತ ನ್ಯಾಯಮೂರ್ತಿ ಎಸ್.ಕೆ.ಪಾಂಡೆ ನೇತೃತ್ವದಲ್ಲಿ ಆಯೋಗ ರಚಿಸಿ ತನಿಖೆಗೆ ಆದೇಶಿಸಿತ್ತು. ಆಯೋಗ ಇದೀಗ ತನ್ನ ವಿಚಾರಣೆ ಪೂರ್ಣಗೊಳಿಸಿದ್ದು, ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಪ್ರಭಾಂಶು ಕಮಾಲ್ ಅವರಿಗೆ 12 ಪುಟಗಳ ವರದಿ ಸಲ್ಲಿಸಿದೆ. ಇದನ್ನು ಮಧ್ಯಪ್ರದೇಶ ಸರ್ಕಾರ ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದ್ದು, ವರದಿಯಲ್ಲಿ ಪೊಲೀಸರಿಗೆ ಕ್ಲೀನ್ ಚಿಟ್ ನೀಡಲಾಗಿದೆ.
"ಗ್ರಾಮಸ್ಥರು ನೀಡಿರುವ ಹೇಳಿಕೆ ಮತ್ತು ಪೊಲೀಸರು ನೀಡಿರುವ ಹೇಳಿಕೆಯಲ್ಲಿ ಯಾವ ವೈರುಧ್ಯವೂ ಇಲ್ಲ. ಗ್ರಾಮಸ್ಥರು ಈ ಘಟನೆಗೆ ಪ್ರತ್ಯಕ್ಷದರ್ಶಿಗಳಾಗಿದ್ದು, ಅವರ ಹೇಳಿಕೆಗಳು ಅಧಿಕೃತ ದಾಖಲೆಗಳಿಗೆ ತಾಳೆಯಾಗುತ್ತವೆ" ಎಂದು ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ ಮಧ್ಯ ಪ್ರದೇಶ ಪೊಲೀಸರಿಗೆ ಕ್ಲೀನ್ ಚಿಟ್ ನೀಡಲಾಗಿದೆ ಎಂದು ತಿಳಿದುಬಂದಿದೆ.