ಮುಂಬೈ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಪ್ರಭಾವಿ ಕಾಂಗ್ರೆಸ್ ನಾಯಕ ನಾರಾಯಣ ರಾಣೆ ಅವರು ಗುರುವಾರ ಕಾಂಗ್ರೆಸ್ ಗೆ ರಾಜಿನಾಮೆ ನೀಡಿದ್ದು, ಶೀಘ್ರದಲ್ಲೇ ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಾಂಗ್ರೆಸ್ ತೊರೆದಿರುವ ರಾಣೆ ಅವರು ಮಹಾಷ್ಟ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯಲ್ಲಿ ತಮ್ಮ ಇಬ್ಬರು ಮಕ್ಕಳಿಗೆ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಆದರೆ ಕೊಂಕಣ ಪ್ರದೇಶದಲ್ಲಿ ಪ್ರಭಾವಿ ನಾಯಕರಾಗಿರುವ ನಾರಾಯಣ ರಾಣೆ ಅವರ ಬಿಜೆಪಿ ಸೇರ್ಪಡೆಗೆ ಶಿವಸೇನೆ ಅಡ್ಡಿಪಡಿಸುತ್ತಿದೆ.
ಮಾಜಿ ಶಿವಸೇನಾ ಮುಖಂಡ ನಾರಾಯಣ ರಾಣೆ ಅವರನ್ನು 2005ರಲ್ಲಿ ಶಿವಸೇನೆಯಿಂದ ಉಚ್ಚಾಟಿಸಲಾಗಿತ್ತು. ಬಳಿಕ ಅವರು ಕಾಂಗ್ರೆಸ್ ಸೇರಿದ್ದರು.
ಉದ್ಧವ್ ಠಾಕ್ರೆ ಪಕ್ಷದಲ್ಲಿ ಪ್ರಭುತ್ವ ಸಾಧಿಸುತ್ತಿರುವುದನ್ನು ವಿರೋಧಿಸಿದ್ದ ರಾಣೆ ಅವರನ್ನು ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಅವರು ಪಕ್ಷದಿಂದ ಉಚ್ಚಾಟಿಸಿದ್ದರು.
ನಾರಾಯಣ ರಾಣೆ ಅವರು ಹಲವು ಬಾರಿ ತಾವು ಬಿಜೆಪಿ ಸೇರುವ ಸುಳಿವು ನೀಡಿದರೂ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಮಹಾರಾಷ್ಟ್ರ ಬಿಜೆಪಿಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಇಲ್ಲ. ಪಕ್ಷದ ಅಧ್ಯಕ್ಷರಾದ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ರಾಣೆಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಆದರೆ ರಾಣೆ ಪಕ್ಷಾಂತರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯವಿದೆ ಎಂದು ಹಿರಿಯ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.
ರಾಣೆಯನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಕ್ಕೆ ಫಡ್ನವಿಸ್ ಅವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ 2019ರ ಲೋಕಸಭೆ ಚುನಾವಣೆ ಗೆಲುವಿಗೆ ತಂತ್ರ ರೂಪಿಸುತ್ತಿರುವ ಅಮಿತ್ ಶಾ ಕಾಂಗ್ರೆಸ್ ನಾಯಕನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.
ಒಂದು ವೇಳೆ ನಾರಾಯಣ ರಾಣೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡರೆ ಮಹಾರಾಷ್ಟ್ರದಲ್ಲಿ ಬಿಜೆಪಿ- ಶಿವಸೇನಾ ಮೈತ್ರಿಗೆ ಧಕ್ಕೆಯಾಗುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics