ಬರೇಲಿ: ರೂ.45 ಲಕ್ಷ ಲಂಚ ಪಡೆದುಕೊಂಡು ಖಲಿಸ್ತಾನ ಉಗ್ರನೊಬ್ಬ ಜೈಲಿನಿಂದ ಪರಾರಿಯಾಗಲೂ ಸಹಾಯ ಮಾಡಿದ್ದಾರೆಂಬ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಐಪಿಎಸ್ ಹಿರಿಯ ಅಧಿಕಾರಿಯೊಬ್ಬರ ವಿರುದ್ದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತನಿಖೆಗೆ ಆದೇಶಿಸಿದ್ದಾರೆಂದು ಗುರುವಾರ ತಿಳಿದುಬಂದಿದೆ.
ಖಲಿಸ್ತಾನ ಉಗ್ರನೊಬ್ಬ ಜೈಲಿನಿಂದ ಪರಾರಿಯಾಗಲು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ರೂ.45 ಲಕ್ಷ ಲಂಚ ಪಡೆದುಕೊಂಡಿದ್ದರು ಎಂದು ಈ ಹಿಂದೆ ಪಂಜಾಪ್ ಪೊಲೀಸ್ ಅಧಿಕಾರಿಗಳು ಆರೋಪ ಮಾಡಿದ್ದರು.
ನಭಾ ಜೈಲೂ ಪರಾರಿ ಪ್ರಕರಣದ ಪ್ರಮುಖ ಆರೋಪಿ ಹಾಗೂ ಖಲಿಸ್ತಾನದ ಉಗ್ರ ಗೋಪಿ ಘನಶ್ಯಾಮಪುರ ಪರಾರಿಯಾಗಲು ಪೊಲೀಸ್ ವರಿಷ್ಠಾಧಿಕಾರಿಗಳು ನೆರವಾಗಿದ್ದರು ಎಂದು ಹೇಳಿ ಪಂಜಾಬ್ ಪೊಲೀಸರು ವರದಿ ಸಲ್ಲಿಸಿದ್ದರು. ಆರೋಪಕ್ಕೆ ಸಂಬಂಧಿಸಿದಂತೆ ಆಡಿಯೋ ಟೇಪ್ ನ್ನು ಸಲ್ಲಿಕೆ ಮಾಡಲಾಗಿದೆ.
ಪೊಲೀಸ್ ಅಧಿಕಾರಿಯ ಲಂಚ ಪ್ರಕರಣದ ಮಾಹಿತಿ ಬಹಿರಂಗೊಳ್ಳುತ್ತಿದ್ದಂತೆಯೇ ಉತ್ತರಪ್ರದೇಶ ರಾಜ್ಯ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತುರ್ತು ಸಭೆ ನಡೆಸಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆಂದು ತಿಳಿದುಬಂದಿದೆ.
ಉತ್ತರ ಪ್ರದೇಶದ ಹಿರಿಯ ಐಪಿಎಸ್ ಅಧಿಕಾರಿಯ ಲಂಚ ಪ್ರಕರಣವನ್ನು ರಾಜ್ಯ ಗೃಹ ಸಚಿವಾಲಯವು ಗಂಭೀರವಾಗಿ ಪರಿಗಣಿಸಿದ್ದು, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರ ಮಟ್ಟದ (ಎಡಿಜಿ) ಅಧಿಕಾರಿಯಿಂದ ಪ್ರಕರಣವನ್ನು ತನಿಖೆಗೆ ಆದೇಶಿಸಲಾಗಿದೆ ಎಂದು ಡಿಜಿಪಿ ಸುಲ್ ಖಾನ್ ಸಿಂಗ್ ಅವರು ತಿಳಿಸಿದ್ದಾರೆ.
ಆರೋಪಿ ಗೋಪಿ ಘನ್ ಶ್ಯಾಮ್'ಪುರ್ ಕೊನೆ ಬಾರಿ ಶಹಜಹಾನ್ ಪುರದಲ್ಲಿ ಸೆ.10ರಂದು ಕಂಡು ಬಂದಿದ್ದ ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.
ನಭಾ ಜೈಲು ಪರಾರಿ ಪ್ರಕರಣದ ಓರ್ವ ಪ್ರಮುಖ ಸಂಚುಕೋರನಾಗಿರುವ ಗೋಪಿಯನ್ನು ಪತ್ತೆ ಹಚ್ಚಲು ನಾವು ಯತ್ನಿಸುತ್ತಿದ್ದೇವೆ. ಆತ ಕಳೆದ ಸೆ.10 ರಂದು ಶಹಜಹಾನ್ ಪುರದಲ್ಲಿ ಕಾಣಿಸಿಕೊಂಡಿದ್ದ. ಆದರೂ ಪರಾರಿಯಾಗುವಲ್ಲಿ ಆತ ಸಫಲನಾಗಿದ್ದ ಎಂದು ಪಂಜಾಬ್ ಉಗ್ರ ನಿಗ್ರಹ ದಳದ ಐಜಿ ವಿಜಯ್ ಪ್ರತಾಪ್ ಸಿಂಗ್ ಅವರು ತಿಳಿಸಿದ್ದಾರೆ.
2016ರ ನ.27 ರಂದು ಸಂಭವಿಸಿದ್ದ ನಭಾ ಜೈಲು ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್ ಪೊಲೀಸರು ಉತ್ತರಪ್ರದೇಶದ ಉಗ್ರ ನಿಗ್ರಹ ದಳದೊಂದಿಗೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ 6 ಶಂಕಿತರನ್ನು ಬಂಧನಕ್ಕೊಳಪಡಿಸಿದ್ದರು. ಮೂಲಗಳ ಪ್ರಕಾರ ಉತ್ತರಪ್ರದೇಶ ಹಿರಿಯ ಪೊಲೀಸ್ ಅಧಿಕಾರಿ ನಭಾ ಜೈಲು ಪರಾರಿ ಪ್ರಕರಣದ ಡೀಲ್ ನಲ್ಲಿ 1 ಕೋಟಿಗೂ ಹೆಚ್ಚು ಹಣವನ್ನು ಕೇಳಿದ್ದು ಬಳಿಕ ಈ ಡೀಲ್ ರೂ.45 ಲಕ್ಷಕ್ಕೆ ಕುದುರಿತ್ತು ಎಂದು ತಿಳಿದುಬಂದಿದೆ.