ದೇಶ

ಭಾರತೀಯ ಯೋಧರ ಹತ್ಯೆ ಮಾಡಿದ್ರೆ ತಕ್ಕ ಪ್ರತ್ಯುತ್ತರ: ಪಾಕ್ ಗೆ ಡಿಜಿಎಂಒ ಎಚ್ಚರಿಕೆ

Lingaraj Badiger
ನವದೆಹಲಿ: ಪದೇಪದೆ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಯೋಧರ ಮೇಲೆ ನಿರಂತರ ಗುಂಡಿನ ದಾಳಿ ನಡೆಸುತ್ತಿರುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಶುಕ್ರವಾರ ಖಡಕ್ ಎಚ್ಚರಿಕೆ ನೀಡಿದ್ದು, ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್ಒಸಿ) ಬಳಿ ನಮ್ಮ ಯಾವುದೇ ಯೋಧರು ಹುತಾತ್ಮರಾದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡುವುದಾಗಿ ಹೇಳಿದೆ.
ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕ(ಡಿಜಿಎಂಒ) ಲೆ.ಜನರಲ್ ಎ ಕೆ ಭಟ್ ಅವರು ಇಂದು ಪಾಕಿಸ್ತಾನ ಸೇನಾ ಕಾರ್ಯಚರಣೆಗಳ ಮುಖ್ಯಸ್ಥರಿಗೆ ದೂರವಾಣಿ ಕರೆ ಮಾಡಿ, ಪಾಕ್ ಸೇನಾ ಬೆಂಬಲದೊಂದಿಗೆ ಗಡಿ ನುಸುಳುವಿಕೆ ಮುಂದುವರೆದಿದ್ದು, ಅದನ್ನು ನಿಲ್ಲಿಸುವಂತೆ ತಾಕೀತು ಮಾಡಿದ್ದಾರೆ.
'ನಮ್ಮ  ಯಾವುದೇ ಯೋಧರು ಜೀವ ಕಳೆದುಕೊಂಡರೆ ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳುವ ಹಕ್ಕನ್ನು ಭಾರತೀಯ ಸೇನೆ ಹೊಂದಿದೆ' ಎಂದು ಭಟ್ ಅವರು ಪಾಕ್ ಗೆ ಸ್ಪಷ್ಟಪಡಿಸಿದ್ದಾರೆ.
ಇನ್ನು ಪಾಕ್ ಡಿಜಿಎಂಒ ಮೇಜರ್ ಜನರಲ್ ಸಹೀರ್ ಶಮಶಾದ್ ಮಿರ್ಚಾ ಅವರು ಸಹ ಭಾರತೀಯ ಸೇನೆ ಪಾಕಿಸ್ತಾನದ ನಾಗರಿಕರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸುತ್ತಿದೆ ಎಂದು ದೂರಿದ್ದಾರೆ. ಆದರೆ ಭಾರತೀಯ ಸೇನೆ ಯಾವುದೇ ನಾಗರಿಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ ಎಂದು ಸ್ಪಷ್ಟಪಡಿಸಿರುವ ಸೇನೆ, ಅಮೃತಸರದಲ್ಲಿ ಗಡಿ ನುಸುಳಲು ಯತ್ನಿಸುತ್ತಿದ್ದವರ ಮೇಲೆ ಮಾತ್ರ ದಾಳಿ ಮಾಡಲಾಗಿದೆ ಎಂದು ಹೇಳಿದೆ.
SCROLL FOR NEXT