ನವದೆಹಲಿ: ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತೀ ದೊಡ್ಡ ಅಕ್ರಮ ಶಸ್ತ್ರಾಸ್ತ್ರ ಜಾಲವೊಂದರ ಮೇಲೆ ಎಟಿಎಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ಭಾನುವಾರ ತಿಳಿದುಬಂದಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಕುಪ್ವಾರ ಜಿಲ್ಲೆಯಲ್ಲಿ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬುದರ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ರಾಜಸ್ತಾನ ಉಗ್ರ ನಿಗ್ರಹ ಪಡೆ ಅಧಿಕಾರಿಗಳು, ಕ್ಷಿಪ್ರ ಕಾರ್ಯಾಚರಣೆ ನಡೆಸಲು ಮುಂದಾಗಿತ್ತು. ದಾಳಿ ವೇಳೆ ಸ್ಥಳದಲ್ಲಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಕಂಡು ಅಧಿಕಾರಿಗಳೇ ಆಘಾತಗೊಂಡಿದ್ದಾರೆ.
ಕುಪ್ವಾರವೊಂದರಲ್ಲೇ ಕಳೆದ 5 ವರ್ಷಗಳಲ್ಲು ಸುಮಾರು 50,000 ಹೆಚ್ಚು ಅನುಮಾನಾಸ್ಪದ ಶಸ್ತ್ರಾಸ್ತ್ರ ಪರವಾನಗಿ ನೀಡಿರುವುದು, ಶಸ್ತ್ರಾಸ್ತ್ರಗಳಿಗೆ ಪರವಾನಗಿ ನೀಡುವ ಕಚೇರಿಯಲ್ಲಿ ಸಾಕಷ್ಟು ಶಸ್ತ್ರಾಸ್ತ್ರಗಳಿಗೆ ಪರವಾನಗಿ ನೀಡಿರುವುದರ ಕುರಿತು ದಾಖಲೆಗಳೇ ಇಲ್ಲದಿರುವುದು, ಇನ್ನು ಕೆಲವು ಪರವಾನಗಿಗಳಲ್ಲಿ ತಿರುಚಿರುವ ದಾಖಲೆಗಳು ಪತ್ತೆಯಾಗಿರುದು ಬೆಳಕಿಗೆ ಬಂದಿದೆ.
ಸ್ಥಳೀಯರ ಬೇಡಿಕೆಗಳನ್ನು ಪೂರೈಸರು ಒಂದು ಜಿಲ್ಲೆಯಲ್ಲಿ ಸಾಮಾನ್ಯವಾಗಿ ಇಬ್ಬರು ಅಧಿಕೃತ ಗನ್ ವಿತರಕರಿರಬೇಕು. ಆದರೆ, ಜಮ್ಮು ಒಂದರಲ್ಲೇ ಸುಮಾರು 24 ಅಧಿಕೃತ ಗನ್ ವಿತರಕರರಿದ್ದಾರೆ. ಇನ್ನು ನಕಲಿ ಸೇನಾ ದಾಖಲೆಗಳನ್ನು ನಿರ್ಮಿಸಿ ಶಸ್ತ್ರಾಸ್ತ್ರಗಳನ್ನು ಇತರರಿಗೆ ಮಾರಾಟ ಮಾಡಿರುವುದನ್ನು ಕಂಡ ಅಧಿಕಾರಿಗಳು ಆಘಾತಗೊಂಡಿದ್ದಾರೆ.
ಮೊದಲ ಹಂತದಲ್ಲಿ ಎಟಿಎಸ್ ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ರಾಜಸ್ತಾನ ಮತ್ತು ಮಧ್ಯಪ್ರದೇಶ ನಾಲ್ಕು ರಾಜ್ಯಗಳಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಈ ವೇಳೆ ಸಾವಿರಾರು ಅಕ್ರಮ ಶಸ್ತ್ರಾಸ್ತ್ರಗಳ ಪರವಾನಗಿಗಳು ಹಾಗೂ 450 ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆಂದು ತಿಳಿದುಬಂದಿದೆ.
ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಧಿಕಾರಿಗಳು, ಪ್ರಸ್ತುತ ಲಭ್ಯವಾಗಿರುವ ಮಾಹಿತಿ ಹಾಗೂ ದಾಳಿ ಕೇವಲ ಟ್ರೇಲರ್ ಅಷ್ಟೇ. ಜಾಲದ ಆಳಕ್ಕೆ ಇನ್ನು ಇಳಿದಿಲ್ಲ. ಪ್ರತಿಯೊಂದು ಪರವಾನಗಿ ಹಾಗೂ ಪಿಸ್ತೂಲಿನ ಬೆಲೆ ಸುಮಾರು ರೂ.12 ಲಕ್ಷಕ್ಕೂ ಹೆಚ್ಚಿದೆ. ಕಳೆದ 8 ವರ್ಷಗಳಿಂದಲೂ ಅಕ್ರಮವಾಗಿ ಈ ಜಾಲವನ್ನು ನಡೆಸಲಾಗುತ್ತಿದೆ. ಇತರೆ ರಾಜ್ಯಗಳಲ್ಲು ಈ ಜಾಲ ಕಾರ್ಯನಿರ್ವಹಿಸುತ್ತಿರುವ ಕುರಿತಂತೆ ನಮಗೆ ಮಾಹಿತಿ ದೊರಕಿದೆ. ಜಾಲದಲ್ಲಿರುವ ಆಗಂತುಕರು ಶಸ್ತ್ರಾಸ್ತ್ರಗಳನ್ನು ತರಕಾರಿಗಳಂತೆ ಮಾರಾಟ ಮಾಡುತ್ತಿದ್ದಾರೆಂಬುದು ನಮಗೆ ತಿಳಿದಿದೆ ಎಂದು ಹೇಳಿದ್ದಾರೆ.