ದೇಶ

ಬಿಹೆಚ್'ಯು ಲೈಂಗಿಕ ಕಿರುಕುಳ ಪ್ರಕರಣ: ಉ.ಪ್ರದೇಶ ಮುಖ್ಯ ಕಾರ್ಯದರ್ಶಿ ನೇತೃತ್ವದ ಸಮಿತಿಯಿಂದ ತನಿಖೆ- ರಾಜ್ಯಪಾಲ

Manjula VN
ಲಖನೌ: ಬನಾರಸ್ ಹಿಂದೂ ವಿಶ್ವವಿದ್ಯಾಲಯ ಲೈಂಗಿಕ ಕಿರುಕುಳ ಪ್ರಕರಣವನ್ನು ಉತ್ತರಪ್ರದೇಶ ರಾಜ್ಯದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿ ತನಿಖೆ ನಡೆಸಲಿದೆ ಎಂದು ಉತ್ತರಪ್ರದೇಶ ರಾಜ್ಯಪಾಲ ರಾಮ್ ನಾಯಕ್ ಅವರು ಸೋಮವಾರ ಹೇಳಿದ್ದಾರೆ. 
ವಿದ್ಯಾರ್ಥಿನಿಯರಿಗೆ ನೀಡಲಾಗಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ವಿದ್ಯಾರ್ಥಿಗಳು ಶನಿವಾರ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ತೀವ್ರಗೊಂಡ ಹಿನ್ನಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಹಲವು ವಿದ್ಯಾರ್ಥಿಗಳು ಹಾಗೂ ಇಬ್ಬರು ಪತ್ರಕರ್ತರು ಗಾಯಗೊಂಡಿದ್ದರು. 
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ರಾಜ್ಯಪಾಲ ರಾಮ್ ನಾಯಕ್ ಅವರು, ಘಟನೆ ನೀಜಕ್ಕೂ ಬೇಸರವನ್ನು ತಂದಿದೆ. ಪ್ರಕರಣ ಕುರಿತಂತೆ ತನಿಖೆ ನಡೆಸಲು ಈಗಾಗಲೇ ಮುಖ್ಯಕಾರ್ಯದರ್ಶಿಗಳ ನೇತೃತ್ವದ ಸಮಿತಿಯನ್ನು ನೇಮಿಸಲಾಗಿದೆ. ವರದಿ ಬಂದ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಪೊಲೀಸರು ಯಾವ ರೀತಿಯಲ್ಲಿ ವರ್ತನೆ ತೋರಿದ್ದರು ಎಂಬುದನ್ನು ಪರಿಶೀಲನೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ. 
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಕ್ತಾರ ಮಾತನಾಡಿ, ಕೆಲ ವಿದ್ಯಾರ್ಥಿಗಳು ಬಲವಂತದಿಂದ ಕುಲಪತಿಗಳ ಮನೆ ನುಗ್ಗಲು ಯತ್ನಿಸುತ್ತಿದ್ದರು. ಆದರೆ, ಈ ವೇಳೆ ಸ್ಥಳದಲ್ಲಿದ್ದ ವಿಶ್ವವಿದ್ಯಾಲಯದ ಭದ್ರತಾ ಸಿಬ್ಬಂದಿಗಳು ಅವರನ್ನು ತಡೆದಿದ್ದರು. ಇದೇ ವೇಳೆ ಹೊರಗಿನಿಂದ ಬಂದಿದ್ದ ಕೆಲ ದುಷ್ಕರ್ಮಿಗಳು ವಿದ್ಯಾರ್ಥಿಗಳ ಮಧ್ಯೆ ಸೇರಿಕೊಂಡು ಕಲ್ಲು ತೂರಾಟ ನಡೆಸಿದ್ದರು. ಇದರ ಪರಿಣಾಮ ಪ್ರತಿಭಟನೆ ಹತ್ತಿಕ್ಕಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು ಎಂದು ತಿಳಿಸಿದ್ದಾರೆ. 
SCROLL FOR NEXT