ಕೇರಳ ಪಾದ್ರಿ ಟಾಮ್ ಉಜುನಾಲಿಲ್
ನವದೆಹಲಿ: ಇಸಿಸ್ ಉಗ್ರರ ಕಪಿಮುಷ್ಟಿಯಿಂದ ರಕ್ಷಣೆಗೊಂಡಿದ್ದ ಕೇರಳ ಪಾದ್ರಿ ಟಾಮ್ ಉಜುನಾಲಿಲ್ ಅವರು ವರ್ಷಗಳ ಬಳಿಕ ತಾಯ್ನಾಡಿಗೆ ಆಗಮಿಸಿದ್ದಾರೆ.
ಇಂದು ಬೆಳಿಗ್ಗೆ 7.40ರ ಸುಮಾರಿಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಪಾದ್ರಿ ಟಾಮ್ ಉಜುನಾಲಿಲ್ ಆಗಮಿಸಿದ್ದಾರೆಂದು ತಿಳಿದುಬಂದಿದೆ.
ರಾಜಧಾನಿ ದೆಹಲಿಗೆ ಬಂದಿಳಿದ ಬಳಿಕ ಹೇಳಿಕೆ ನೀಡಿರುವ ಅವರು, ತಾಯ್ನಾಡಿಗೆ ಬಂದಿಳಿದಿರುವುದು ಬಹಳ ಸಂತೋಷವಾಗುತ್ತಿದೆ. ನನ್ನ ರಕ್ಷಣೆಗಾಗಿ ಶ್ರಮಪಟ್ಟವರಿಗೆಲ್ಲರಿಗೂ ಈ ಮೂಲಕ ಧನ್ಯವಾದಗಳನ್ನು ಸಲ್ಲಿಸುತ್ತೇನೆಂದು ಹೇಳಿದ್ದಾರೆ.
ದೆಹಲಿಗೆ ಆಗಮಿಸಿರುವ ಟಾಮ್ ಉಜುನಾಲಿಲ್ ಅವರು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಲಿದ್ದಾರೆಂದು ವರದಿಗಳು ತಿಳಿಸಿವೆ.
ಕೇರಳದ ಕೊಟ್ಟಾಯಂ ಜಿಲ್ಲೆಯ ರಾಮಪುರಂನ ಉಜುನಾಲಿಲ್ ಅವರು ಸಲೆಸಿಯನ್ಸ್ ಆಫ್ ಡಾನ್'ಬಾಸ್ಕೊ ಸಂಸ್ಥೆಯ ಬೆಂಗಳೂರು ಪ್ರಾಂತಕ್ಕೆ ಸೇರಿದ್ದು, ಕಳೆದ 5 ವರ್ಷಗಳಿಂದ ಯೆಮನ್ ನಲ್ಲಿದ್ದರು. ಯೆಮನ್'ನ ಏಡೆನ್ ನಲ್ಲಿ ಕ್ರೈಸ್ತ ಧರ್ಮ ಪ್ರಚಾರಕ ಸಮಿತಿಗೆ ಸೇರಿದ ಶಾಲೆಯಲ್ಲಿ ಮಾ.4 ರಂದು ಉಪನ್ಯಾಸ ನೀಡುತ್ತಿದ್ದ 56 ವರ್ಷದ ಟಾಮ್ ಉಜನಾಲಿಲ್ ಅವರನ್ನು ಉಗ್ರರು ಅಪಹರಿಸಿದ್ದರು. ಸಾಕಷ್ಟು ಪರಿಶ್ರಮಗಳ ಬಳಿಕ ಫಾದರ್ ಟಾಮ್ ಅವರನ್ನು ಸೆ.12 ರಂದು ರಕ್ಷಣೆ ಮಾಡಲಾಗಿತ್ತು.