ಚೆನ್ನೈ: ಕಾಂಗ್ರೆಸ್ ಪಕ್ಷ ತನಗೆ ಬೆಂಬಲ ನೀಡಿದರೆ ಕೇಂದ್ರದ ಎನ್ ಡಿಎ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ತಾನು ಸಿದ್ಧ ಎಂದು ತಮಿಳುನಾಡಿನ ಆಡಳಿತಾ ರೂಢ ಎಐಎಡಿಎಂಕೆ ಪಕ್ಷ ಘೋಷಣೆ ಮಾಡಿದೆ.
ಕಾವೇರಿ ನಿರ್ವಹಣಾ ಮಂಡಳಿ ರಚನೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಎಐಎಡಿಎಂಕೆ ಇದಾಗ ಕೇಂದ್ರ ಸರ್ಕಾರದ ವಿರುದ್ಧ ತಿರುಗಿ ಬಿದ್ದಿದ್ದು, ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ತಾನು ಸಿದ್ಧ ಎಂದು ಹೇಳಿದೆ.
ಕಾಂಗ್ರೆಸ್ ಬೆಂಬಲ ನೀಡಿದರು ತಾನು ಖಂಡಿತಾ ಕೇಂದ್ರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಳತ್ವ ವಹಿಸಲು ಸಿದ್ಧ ಎಂದು ಎಐಎಡಿಎಂಕೆ ಪಕ್ಷದ ಮುಖಂಡ ಎಂ ತಂಬಿದೊರೈ ಅವರು ಹೇಳಿದ್ದಾರೆ. ನಿನ್ನೆ ನಡೆದ ಸರ್ವಪಕ್ಷ ಸಭೆಯಲ್ಲಿ ಡಿಎಂಕೆ ಮುಖ್ಯಸ್ಥ ಎಂಕೆ ಸ್ಟಾಲಿನ್ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವಂತೆ ಸಲಹೆ ನೀಡಿದ್ದರು. ಅದರಂತೆ ನಾವು ಅವಿಶ್ವಾಸ ನಿರ್ಣಯ ಮಂಡನೆ ಸಿದ್ಧವಿದ್ದು, ಇದಕ್ಕೆ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಬೆಂಬಲ ನೀಡಬೇಕು. ಡಿಎಂಕೆ ಪಕ್ಷ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಅಂಗಪಕ್ಷವಾಗಿದೆ. ಬೇಕಿದ್ದರೆ ಡಿಎಂಕೆ ಕಾಂಗ್ರೆಸ್ ಮುಖ್ಯಸ್ಥರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಈ ಸಂಬಂಧ ಚರ್ಚೆ ನಡೆಸಲಿ. ಅವರು ಒಪ್ಪಿಕೊಂಡರೆ ಕೇಂದ್ರದ ವಿರುದ್ಧ ತಾನು ಅವಿಶ್ವಾಸ ನಿರ್ಣಯ ಮಂಡನೆ ಮಾಡುತ್ತೇವೆ ಎಂದು ಹೇಳಿದರು.
ನಿನ್ನೆಯಷ್ಟೇ ಚೆನ್ನೈನಲ್ಲಿ ಡಿಎಂಕೆ ನೇತೃತ್ವದಲ್ಲಿ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಎಐಎಡಿಎಂಕೆ ಪಕ್ಷದ ಸದಸ್ಯರು ಪಾಲ್ಗೊಂಡಿದ್ದರು. ಈ ವೇಳೆ ಕಾವೇರಿ ನಿರ್ವಹಣಾ ಮಂಡಳಿ ರಚನೆ ಮಾಡಲೇಬೇಕು ಎಂದು ಪಟ್ಟು ಹಿಡಿದಿರುವ ತಮಿಳುನಾಡು ಸರ್ಕಾರ ಈ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ಕೂಡ ದಾಖಲಿಸಿದೆ.
ಇನ್ನು ಇದೇ ಏಪ್ರಿಲ್ 5ರಂದು ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ಡಿಎಂಕೆ ಪಕ್ಷ ತಮಿಳುನಾಡು ಬಂದ್ ಗೆ ಕರೆ ನೀಡಿದ್ದು, ಇದಕ್ಕೂ ಮೊದಲು ತಮಿಳುನಾಡು ರೈತಪರ ಸಂಘಟನೆಗಳು ಹಾಗೂ ತಮಿಳುನಾಡು ವ್ಯಾಪಾರಸ್ಥರ ಒಕ್ಕೂಟ ಏಪ್ರಿಲ್ 3ರಂದು ತಮಿಳುನಾಡು ಬಂದ್ ಗೆ ಕರೆ ನೀಡಿವೆ. ಏಪ್ರಿಲ್ 3 ರ ಬಂದ್ ದಿನದಂದೇ ಆಡಳಿತ ರೂಢ ಎಐಡಿಎಂಕೆ ಪಕ್ಷದ ಸದಸ್ಯರು ಉಪವಾಸ ಸತ್ಯಾಗ್ರಹ ಕೂಡ ನಡೆಸಲಿದ್ದಾರೆ. ಅಂದು ಸಿಎಂ ಇ ಪಳನಿ ಸ್ವಾಮಿ, ಮತ್ತು ಉಪ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಕೂಡ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ.