ದೇಶ

ಮಾನನಷ್ಟ ಮೊಕದ್ದಮೆ ಇತ್ಯರ್ಥಕ್ಕಾಗಿ ಜಂಟಿ ಅರ್ಜಿ ಸಲ್ಲಿಸಿದ ಜೇಟ್ಲಿ, ಕೇಜ್ರಿವಾಲ್

Srinivas Rao BV
ನವದೆಹಲಿ: ಮಾನನಷ್ಟ ಮೊಕದ್ದಮೆಯನ್ನು ಇತ್ಯರ್ಥಗೊಳಿಸುವುದಕ್ಕಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಇಬ್ಬರೂ ದೆಹಲಿ ಹೈಕೋರ್ಟ್ ಗೆ  ಜಂಟಿ ಅರ್ಜಿ ಸಲ್ಲಿಸಿದ್ದಾರೆ. 
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅರುಣ್ ಜೇಟ್ಲಿ ವಿರುದ್ಧ ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಕ್ಷಮೆ ಕೋರಿದ ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ಇತ್ಯರ್ಥಗೊಳಿಸುವ ತೀರ್ಮಾನಕ್ಕೆ ಬರಲಾಗಿದ್ದು ನ್ಯಾ.ಮನ್ ಮೋಹನ್ ಅವರೆದುರು ಅರ್ಜಿ ಸಲ್ಲಿಸಲಾಗಿದೆ. 
ವಿಚಾರಣೆ ನಡೆಸುವುದಕ್ಕೆ ನ್ಯಾಯಾಲಯವೂ ಸಮ್ಮತಿ ಸೂಚಿಸಿದೆ. 2015 ರಲ್ಲಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ 5 ಆಪ್ ನಾಯಕರ ವಿರುದ್ಧ ಅರುಣ್ ಜೇಟ್ಲಿ 10 ಕೋಟಿ ರೂಪಾಯಿಗಳಿಗೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಅರುಣ್ ಜೇಟ್ಲಿ ಡಿಡಿಸಿಎ ಅಧ್ಯಕ್ಷರಾಗಿದ್ದಾಗ ಅಕ್ರಮ ನಡೆದಿದೆ ಎಂದು ಅರುಣ್ ಜೇಟ್ಲಿ ವಿರುದ್ಧ ಕೇಜ್ರಿವಾಲ್ ಆರೋಪಿಸಿದ್ದರು. ಅಷ್ಟೇ ಅಲ್ಲದೇ ಕೇಜ್ರಿವಾಲ್ ಅವರ ಪರವಾಗಿ ವಾದ ಮಂಡಿಸುತ್ತಿದ್ದ ವಕೀಲರಾಗಿದ್ದ ರಾಮ್ ಜೇಟ್ಮಲಾನಿ ಅವರು ಜೇಟ್ಲಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದ ಹಿನ್ನೆಲೆಯಲ್ಲಿ ಜೇಟ್ಲಿ ಕೇಜ್ರಿವಾಲ್ ವಿರುದ್ಧ 10 ಕೋಟಿ ರೂ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಈಗಗಾಲೇ ಕ್ಷಮೆ ಕೋರಿದ್ದಾರೆ. ಆದರೆ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಆಪ್ ನಾಯಕ ಕುಮಾರ್ ವಿಶ್ವಾಸ್ ಕ್ಷಮೆ ಕೋರದ ಹಿನ್ನೆಲೆಯಲ್ಲಿ ಅವರ ವಿರುದ್ಧ ವಿಚಾರಣೆ ಮುಂದುವರೆಯಲಿದೆ. 
SCROLL FOR NEXT