ನವದೆಹಲಿ: ಸುಳ್ಳು ಸುದ್ದಿ ಪ್ರಕಟಿಸುವ ಪತ್ರಕರ್ತರ ಮಾನ್ಯತೆ ರದ್ದು ಮಾಡುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಆದೇಶವನ್ನು ಪ್ರಧಾನಿ ಕಾರ್ಯಾಲಯ ತಡೆ ಹಿಡಿದ್ದ ಬೆನ್ನಲ್ಲೇ ಮಾತನಾಡಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ, ಸುಳ್ಳು ಸುದ್ದಿ ಬೆದರಿಕೆ ವಿರುದ್ಧ ಪತ್ರಕರ್ತರೊಂದಿಗೆ ಮಾತನಾಡಲು ಚರ್ಚೆಗೆ ಸಿದ್ಧವಿರುವುದಾಗಿ ಹೇಳಿದ್ದಾರೆ.
ಸುಳ್ಳು ಸುದ್ದಿಗಳ ಕುರಿತು ನಿರ್ಣಯ ಕೈಗೊಳ್ಳುವ ಹೊಣೆಯನ್ನು ಭಾರತೀಯ ಪತ್ರಿಕಾ ಮಂಡಳಿ ಮತ್ತು ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಷನ್ ಗೆ ನೀಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಪತ್ರಕರ್ತರು ಹಾಗೂ ಸಂಸ್ಥೆಗಳು ಸಕಾರಾತ್ಮಕ ಸಲಹೆ ನೀಡಬಹುದು ಎಂದಿದ್ದಾರೆ.
ಸುಳ್ಳು ಸುದ್ದಿ ಬೆದರಿಕೆ ವಿರುದ್ಧ ಹಾಗೂ ನೈತಿಕ ಪತ್ರಿಕೋದ್ಯಮದ ಸಂಬಂಧ ಸಕಾರಾತ್ಮಕ ಸಲಹೆ ಪಡೆಯಲು ಪತ್ರಕರ್ತರು ಹಾಗೂ ಸಂಸ್ಥೆಗಳೊಂದಿಗೆ ಚರ್ಚೆ ನಡೆಸಲು ಸಂತೋಷವಾಗುತ್ತಿದೆ. ಆಸಕ್ತ ಪತ್ರಕರ್ತರು ಹಾಗೂ ಪತ್ರಿಕಾ ಸಂಸ್ಥೆಗಳು ಮಾಹಿತಿ ಮತ್ತು ಪ್ರಸಾರ ಸಚಿವಾಲಯದಲ್ಲಿ ತಮ್ಮನ್ನು ಮುಕ್ತವಾಗಿ ಭೇಟಿಯಾಗಿ ಮಾತುಕತೆ ನಡೆಸಬಹುದು ಎಂದು ಸ್ಮೃತಿ ಇರಾನಿ ಟ್ವಿಟರ್ ತಿಳಿಸಿದ್ದಾರೆ.