ಶ್ರೀನಗರ: ಏ.03 ರಂದು ಜಮ್ಮು-ಕಾಶ್ಮೀರದಲ್ಲಿ ಪ್ರವಾಸಿಗರ ಮೇಲೆ ಕಲ್ಲು ತೂರಾಟ ನಡೆದಿರುವ ಬಗ್ಗೆ ವರದಿಗಳಾಗಿವೆ.
ಪ್ರವಾಸಿಗರ ಮೇಲೆ ಕಲ್ಲು ತೂರಾಟ ನಡೆದಿರುವ ವರದಿಗಳ ಬಗ್ಗೆ ಜಮ್ಮು-ಕಾಶ್ಮೀರ ಸಚಿವ ನಯೀಂ ಅಕ್ತರ್ ಪ್ರತಿಕ್ರಿಯೆ ನೀಡಿದ್ದು, ವರದಿಗಳನ್ನು ಅಲ್ಲಗಳೆದಿದ್ದಾರೆ. ಅಷ್ಟೇ ಅಲ್ಲದೇ ರಾಜ್ಯದ ಘನತೆಗೆ ಧಕ್ಕೆ ಉಂಟುಮಾಡಲು ಈ ರೀತಿಯಾದ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ಆರೋಪ ಮಾಡಿದ್ದಾರೆ.
ಜಮ್ಮು-ಕಾಶ್ಮೀರ ದೇಶದಲ್ಲಿ ಅತ್ಯಂತ ಸುರಕ್ಷಿತವಾದ ಪ್ರವಾಸಿ ತಾಣವಾಗಿದ್ದು, ತಪ್ಪು ಮಾಹಿತಿಗಳನ್ನು ನಂಬದಂತೆ ಪ್ರವಾಸಿಗರಿಗೆ ನಯೀಂ ಅಕ್ತರ್ ಮನವಿ ಮಾಡಿದ್ದಾರೆ. ಪ್ರವಾಸೋದ್ಯಮದ ಸೀಸನ್ ನಲ್ಲಿ ಇಂತಹ ತಪ್ಪು ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಹರಡಲಾಗುತ್ತಿದೆ ಎಂದು ಸಚಿವರು ಹೇಳಿದ್ದು, ಜಮ್ಮು-ಕಾಶ್ಮೀರದ ಜನತೆಯ ಜೀವನವನ್ನು ಸಾಮಾನ್ಯ ಸ್ಥಿತಿಗೆ ತರಲು ಮಾಧ್ಯಮಗಳು ಸಹಕರಿಸಬೇಕೆಂದು ನಯೀಂ ಅಕ್ತರ್ ಮನವಿ ಮಾಡಿದ್ದಾರೆ.