ನವದೆಹಲಿ: ತಜ್ಞರಿಂದ ಅನುಮೋದನೆಗೊಂಡಿರುವ ಆಧಾರ್ ಯೋಜನೆ ನೀತಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ನ್ಯಾಯಾಂಗದ ವಿಮರ್ಶೆಗೆ ಮುಕ್ತವಾಗಿರುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಏ.04 ರಂದು ತಿಳಿಸಿದೆ. ಆದರೆ ಈ ಬಗ್ಗೆ ಸುಪ್ರೀಂ ಕೋರ್ಟ್ ಬೇರೆಯದ್ದೇ ರೀತಿಯಲ್ಲಿ ವ್ಯಾಖ್ಯಾನ ನೀಡಿದ್ದು, ಆಧಾರ್ ಗೆ ಡಿಎನ್ಎ ಸೇರಿದಂತೆ ಹೆಚ್ಚು ಬಯೋಮೆಟ್ರಿಕ್ ವೈಶಿಷ್ಟ್ಯಗಳು ಅಳವಡಿಕೆಯಾದಂತೆಲ್ಲಾ ಅದು ಸಂಸತ್ ನ ಮಿತಿ ಮೀರಿದ ಅಧಿಕಾರಕ್ಕೆ ಕಾರಣವಾಗುವುದಿಲ್ಲವೇ ಎಂದು ಪ್ರಶ್ನಿಸಿದೆ.
ಆಧಾರ್ ಸ್ಕೀಂ ನ ಸಿಂಧುತ್ವವನ್ನು ಪರಿಶೀಲಿಸುತ್ತಿರುವ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿದ್ದ ಪಂಚ ಸದಸ್ಯ ಸಾಂವಿಧಾನಿಕ ಪೀಠದ ಎದುರು ಹೇಳಿಕೆ ನೀಡಿರುವ ಸರ್ಕಾರದ ಪ್ರತಿನಿಧಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್, ತಜ್ಞರಿಂದ ಅನುಮೋದನೆಗೊಂಡಿರುವ ನೀತಿಗೆ ಸಂಬಂಧಪಟ್ಟ ಸರ್ಕಾರದ ನಿರ್ಧಾರಗಳು ನ್ಯಾಯಾಂಗದ ವಿಮರ್ಶೆಗೆ ಮುಕ್ತವಾಗಿರುವುದಿಲ್ಲ ಎಂದು ಹೇಳಿದೆ.
ಆದರೆ ಕೇಂದ್ರದ ವಾದಕ್ಕೆ ಬೇರೆಯದ್ದೇ ರೀತಿಯ ವ್ಯಾಖ್ಯಾನ ಮಾಡಿರುವ ನ್ಯಾಯಾಲಯ ಮುಂದಿನ ದಿನಗಳಲ್ಲಿ ಆಧಾರ್ ಗೆ ಹೆಚ್ಚು ಬಯೋಮೆಟ್ರಿಕ್ ವಿವರಗಳ ವೈಶಿಷ್ಟ್ಯಗಳನ್ನು ಸೆರಿಸಿದಂತೆಲ್ಲಾ ಅದು ಸಂಸತ್ ನ ಮಿತಿ ಮೀರಿದ ಅಧಿಕಾರಕ್ಕೆ ಕಾರಣವಾಗುವುದಿಲ್ಲವೇ ಎಂದು ಪ್ರಶ್ನಿಸಿದೆ.
ಆಧಾರ್ ಕಾರ್ಡ್ ನ ಮೂಲಕ ಬೆರಳಚ್ಚು ಹಾಗೂ ಐರಿಸ್ ಸ್ಕ್ಯಾನ್ ಸೇರಿದಂತೆ ಬಯೋಮೆಟ್ರಿಕ್ ಡೇಟಾವನ್ನು ಪಡೆಯುವುದು ಖಾಸಗಿತನದ ಉಲ್ಲಂಘನೆಯೋ ಅಲ್ಲವೋ ಎಂಬುದನ್ನು ನ್ಯಾಯಾಂಗ ವಿಮರ್ಶೆಗೆ ಒಳಪಡಿಸಿದೆ, ಹಾಗೆಯೇ ಇನ್ನು ಮುಂದಿನ ದಿನಗಳಲ್ಲಿ ಒಂದು ವೇಳೆ ಆಧಾರ್ ಕಾರ್ಡ್ ಗೆ ರಕ್ತ, ಮೂತ್ರ, ಡಿಎನ್ಎ ಯಂತಹ ಬಯೋಮೆಟ್ರಿಕ್ ವಿವರಗಳನ್ನು ಹೊಂದಿರುವ ವೈಶಿಷ್ಟ್ಯ ನೀಡಿದರೆ ಅದೂ ಸಹ ನ್ಯಾಯಾಂಗದ ವಿಮರ್ಶೆಗೆ ಒಳಪಡಲಿದೆ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.
ಇದೇ ವೇಳೆ ಆಧಾರ್ ಕಾರ್ಡ್ ಗಳನ್ನು ಫಲಾನುಭವಿಗಳ ಯೋಜನೆಗಳಿಗೆ ಲಿಂಕ್ ಮಾಡುವುದರಿಂದ, ಸೋರಿಕೆಯನ್ನು ತಡೆಗಟ್ಟಿ, ಸೂಕ್ತ ಫಲಾನುಭವಿಗಳಿಗೇ ಯೋಜನೆಯ ಉಪಯೋಗ ತಲುಪುವಂತೆ ಮಾಡುವುದು ಸಾಧ್ಯ ಎಂದು ಅಟಾರ್ನಿ ಜನರಲ್ ವೇಣುಗೋಪಾಲ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೇ ಸಮಾಜಿಕ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಬೆರಳಚ್ಚು ಪಡೆಯುವುದನ್ನು ಸಮರ್ಥಿಸಿಕೊಳ್ಳಲು ಅಟಾರ್ನಿ ಜನರಲ್ ತಮ್ಮ ವಾದದಲ್ಲಿ ವಿದೇಶಿ ನ್ಯಾಯಾಲಯಗಳ ತೀರ್ಪನ್ನೂ ಉಲ್ಲೇಖಿಸಿದ್ದಾರೆ. ಆದರೆ ಇದರಿಂದ ಹೆಚ್ಚು ಗೊಂದಲ ಉಂಟಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿದೇಶಿ ನ್ಯಾಯಾಲಯಗಳ ತೀರ್ಪನ್ನು ಉಲ್ಲೇಖಿಸದಂತೆ ಕೋರ್ಟ್ ಅಟಾರ್ನಿ ಜನರಲ್ ಗೆ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics