ದೇಶ

ಸಿಬಿಎಸ್ಇ ಮರುಪರೀಕ್ಷೆ ನಿರ್ಧಾರ ಪ್ರಶ್ನಿಸಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್

Manjula VN
ನವದೆಹಲಿ; ದೇಶದಾದ್ಯಂತ ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಸಿಬಿಎಸ್ಇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಮರುಪರೀಕ್ಷೆ ಕುರಿತು ಸಲ್ಲಿಸಲಾಗಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್ ಬುಧವಾರ ವಜಾಗೊಳಿಸಿದೆ. 
ಸಿಬಿಎಸ್ಇ ಮರುಪರೀಕ್ಷೆ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಇಂದು ವಿಚಾರಣೆ ನಡೆಸಿರುವ ನ್ಯಾಯಾಲಯ, ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದ್ದು, ಮರುಪರೀಕ್ಷೆ ಕುರಿತ ನಿರ್ಧಾರ ಸಿಬಿಎಸ್ಇ ಮಂಡಳಿಗೆ ಸಂಬಂಧಿಸಿದ್ದ ವಿಚಾರವಾಗಿದ್ದು, ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 
ಪ್ರಶ್ನೆಪತ್ರಿಗೆ ಸೋರಿಕೆಯಾದ ಬಳಿಕ ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಸಿಬಿಎಸ್ಇ ಮಂಡಳಿಯು, 12ನೇ ತರಗತಿಯ ಅರ್ಥಶಾಸ್ತ್ರ ಪತ್ರಿಕೆ ಹಾಗೂ 10ನೇ ತರಗತಿಯ ಗಣಿತ ಮರು ಪರೀಕ್ಷೆಯನ್ನು ಏ.25ಕ್ಕೆ ನಡೆಸುವುದಾಗಿ ಹೇಳಿತ್ತು. 
ಬಳಿಕ ಹಲವು ಚರ್ಚೆಗಳ ಬಳಿಕ ಮತ್ತೊಮ್ಮೆ ಹೇಳಿಕೆ ನೀಡಿದ್ದ ಸಿಬಿಎಸ್ಇ 10ನೇ ತರಗತಿಯ ಗಣಿತ ಪರೀಕ್ಷೆಯನ್ನು ಮರುಪರೀಕ್ಷೆ ನಡೆಸುವುದಿಲ್ಲ ಎಂದು ತಿಳಿಸಿತ್ತು. 
ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಅಧಿಕಾರಿಗಳು 12ನೇ ತರಗತಿಯ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ  ಇಬ್ಬರು ಖಾಸಗಿ ಶಾಲೆಯ ಶಿಕ್ಷಕರ ಕೈವಾಡವಿರುವ ಶಂಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ಇಬ್ಬರು ಶಿಕ್ಷಕರು ಸೇರಿ ಒಟ್ಟು ಮೂವರನ್ನು ದೆಹಲಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. 
SCROLL FOR NEXT