ನವದೆಹಲಿ: ಸಿಬಿಎಸ್ಇ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರು ಪರೀಕ್ಷಾ ಪ್ರಕ್ರಿಯೆ ಸುರಕ್ಷತೆಯಿಂದ ನಡೆಯುವ ಸಲುವಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಬುಧವಾರ ಉನ್ನತ ಮಟ್ಟದ ಸಮಿತಿಯನ್ನು ರಚನೆ ಮಾಡಿದೆ.
12ನೇ ತರಗತಿಯ ಅರ್ಥಶಾಸ್ತ್ರ ಮರುಪರೀಕ್ಷೆ ಏ.25 ರಂದು ನಡೆಯಲಿದ್ದು, ಪರೀಕ್ಷೆಯಲ್ಲಿ ಯಾವುದೇ ಮೋಸಗಳಾಗಂತೆ ಸುರಕ್ಷತೆಯಿಂದ ನಡೆಸುವ ಸಲುವಾಗಿ ಸಚಿವಾಲಯವು ಸಮಿತಿಯನ್ನು ರಚನೆ ಮಾಡಿದೆ ಎಂದು ತಿಳಿದುಬಂದಿದೆ.
ತಂತ್ರಜ್ಞಾನ ಬಳಕೆ ಮೂಲಕ ಸಿಬಿಎಸ್ಇ ಪರೀಕ್ಷಾ ಪ್ರಕ್ರಿಯೆಗಳು ಸುರಕ್ಷೆಯಿಂದ ನಡೆಯುವ ಕುರಿತಂತೆ ಸಮಿತಿಯು ಸಲಹೆಗಳನ್ನು ನೀಡಲಿದ್ದು, ಸಮಿತಿಯ ಸಲಹೆಯಂತೆ ಪರೀಕ್ಷಾ ಮಂಡಳಿ ಪರೀಕ್ಷೆಯನ್ನು ನಡೆಸಬೇಕಿದೆ ಎಂದು ವರದಿಗಳು ತಿಳಿಸಿವೆ.
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಮಾಜಿ ಕಾರ್ಯದರ್ಶಿ ವಿ.ಎಸ್ ಒಬೆರಾಯ್ ಅವರ ನೇತೃತ್ವದಲ್ಲಿ ಮಂಗಳವಾರ ಸಚಿವಾಲಯ ಸಮಿತಿಯನ್ನು ರಚನೆ ಮಾಡಿದ್ದು, ಸಮಿತಿಯು ಮೇ.31ರಂದು ವರದಿಯನ್ನು ಸಚಿವಾಲಯಕ್ಕೆ ಸಲ್ಲಿಸಲಿದೆ ಎಂದು ಹೇಳಲಾಗುತ್ತಿದೆ.
ಪ್ರಶ್ನೆಪತ್ರಿಗೆ ಸೋರಿಕೆಯಾದ ಬಳಿಕ ಕೆಲ ದಿನಗಳ ಹಿಂದಷ್ಟೇ ಹೇಳಿಕೆ ನೀಡಿದ್ದ ಸಿಬಿಎಸ್ಇ ಮಂಡಳಿಯು, 12ನೇ ತರಗತಿಯ ಅರ್ಥಶಾಸ್ತ್ರ ಪತ್ರಿಕೆ ಹಾಗೂ 10ನೇ ತರಗತಿಯ ಗಣಿತ ಮರು ಪರೀಕ್ಷೆಯನ್ನು ಏ.25ಕ್ಕೆ ನಡೆಸುವುದಾಗಿ ಹೇಳಿತ್ತು.
ಬಳಿಕ ಹಲವು ಚರ್ಚೆಗಳ ಬಳಿಕ ಮತ್ತೊಮ್ಮೆ ಹೇಳಿಕೆ ನೀಡಿದ್ದ ಸಿಬಿಎಸ್ಇ 10ನೇ ತರಗತಿಯ ಗಣಿತ ಪರೀಕ್ಷೆಯನ್ನು ಮರುಪರೀಕ್ಷೆ ನಡೆಸುವುದಿಲ್ಲ ಎಂದು ತಿಳಿಸಿತ್ತು.