ದೇಶ

ಕೇಂಬ್ರಿಡ್ಜ್ ಅನಲಿಟಿಕಾಗೆ 5 ಲಕ್ಷ ಭಾರತೀಯರ ಮಾಹಿತಿ ಹಂಚಿಕೆಯಾಗಿದೆ: ಫೇಸ್ ಬುಕ್

Lingaraj Badiger
ನವದೆಹಲಿ: ಬ್ರಿಟಿಷ್ ರಾಜಕೀಯ ವಿಶ್ಲೇಷಕ ಕಂಪನಿ ಕೇಂಬ್ರಿಡ್ಜ್ ಅನಲಿಟಿಕಾಗೆ ಸುಮಾರು 5.6 ಲಕ್ಷ ಭಾರತೀಯ ಬಳಕೆದಾರರ ಮಾಹಿತಿಯನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ಇದೇ ಮೊದಲ ಬಾರಿಗೆ ಫೇಸ್ ಬುಕ್ ಒಪ್ಪಿಕೊಂಡಿದೆ.
ಕೇಂಬ್ರಿಡ್ಜ್ ಅನಲಿಟಿಕಾ ಸಂಸ್ಥೆ ಹಗರಣ ಹೊರ ಬಿದ್ದ ಬಳಿಕ ಇದೇ ಮೊದಲ ಬಾರಿಗೆ ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ದತ್ತಾಂಶ ಸೋರಿಕೆ ಸಂಬಂಧ ಮಾಹಿತಿ ಹೊರ ಹಾಕಿದ್ದು, 2016ರ ಅಮೆರಿಕ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಒಟ್ಟಾರೆ 8.7 ಕೋಟಿ ಬಳಕೆದಾರರ ಮಾಹಿತಿಯನ್ನು ಹಂಚಿಕೊಳ್ಳಲಾಗಿತ್ತು ಎಂದು ಹೇಳಿದೆ. ಈ ಪೈಕಿ ಅಮೆರಿಕ ಬಳಕೆದಾರರೇ ಹೆಚ್ಚಾಗಿದ್ದು, 562,455 ಭಾರತೀಯ ಬಳಕೆದಾರರ ಮಾಹಿತಿಯನ್ನು ಕೇಂಬ್ರಿಡ್ಜ್ ಅನಲಿಟಿಕಾದೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಫೇಸ್ ಬುಕ್ ತಿಳಿಸಿದೆ.
ಒಟ್ಟು 8.7 ಕೋಟಿ ಬಳಕೆದಾರರ ಮಾಹಿತಿಯನ್ನು ಕೇಂಬ್ರಿಡ್ಜ್ ಅನಲಿಟಿಕಾದೊಂದಿಗೆ ಹಂಚಿಕೊಳ್ಳಲಾಗಿದ್ದು, ಈ ಪೈಕಿ 70 ಮಿಲಿಯನ್ ಅಮೆರಿಕ ಬಳಕೆದಾರರಿದ್ದಾರೆ ಎಂದು ಫೇಸ್ ಬುಕ್ ಮುಖ್ಯ ತಂತ್ರಜ್ಞಾನ ಅಧಿಕಾರಿ ಮೈಕ್ ಶ್ರೋಪ್ಫರ್ ಅವರು ತಮ್ಮ ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಹಿಂದೆ ಅಂದರೆ ಹಗರಣ ಬೆಳಕಿಗೆ ಬಂದ ಸಂದರ್ಭದಲ್ಲಿ ಸುಮಾರು 5 ಕೋಟಿ ಬಳಕೆದಾರರ ದತ್ತಾಂಶ ಹಂಚಿಕೊಂಡ ಬಗ್ಗೆ ಅಂದಾಜಿಸಲಾಗಿತ್ತು. ಆದರೆ ಈ ಪ್ರಮಾಣ ಮುಕ್ಕಾಲು ಪಟ್ಟು ಹೆಚ್ಚಾಗಿದ್ದು, 8.7 ಕೋಟಿ ಬಳಕೆಗಾರರ ದತ್ತಾಂಶ ಹಂಚಿಕೊಂಡ ಬಗ್ಗೆ ಫೇಸ್‌ಬುಕ್ ಇದೇ ಮೊದಲ ಬಾರಿಗೆ ಮಾಹಿತಿ ನೀಡಿದೆ.
SCROLL FOR NEXT