ದೇಶ

ಕೃಷ್ಣಮೃಗ ಬೇಟೆ ಪ್ರಕರಣ: ಸಲ್ಮಾನ್ ಖಾನ್ ಜಾಮೀನು ಅರ್ಜಿ ಆದೇಶ ನಾಳೆಗೆ ಮುಂದೂಡಿಕೆ

Srinivasamurthy VN
ಜೋಧ್ ಪುರ: ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ನಟ ಸಲ್ಮಾನ್ ಖಾನ್ ಜಾಮೀನು ಅರ್ಜಿ ಆದೇಶವನ್ನು ಜೋಧ್ ಪುರ ನ್ಯಾಯಾಲಯ ನಾಳೆಗೆ ಮುಂದೂಡಿದೆ.
ನಿನ್ನೆ ನಡೆದ ವಿಚಾರಣೆಯಲ್ಲಿ ತನ್ನ ಅಂತಿಮ ತೀರ್ಪು ಪ್ರಕಟ ಮಾಡಿದ್ದ ಜೋದ್ ಪುರ ನ್ಯಾಯಾಲಯ ನಟ ಸಲ್ಮಾನ್ ಖಾನ್ ಗೆ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿತ್ತು. ಈ ತೀರ್ಪು ಹೊರಬಿದ್ದ ಬೆನ್ನಲ್ಲೇ ಸಲ್ಮಾನ್ ಖಾನ್ ಪರ ವಕೀಲರು ಜೋದ್​ಪುರ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆಯನ್ನು ಇಂದು ನಡೆಸಲಾಯಿತು.
ಜೋದ್​ಪುರದ ಕಂಕನಿ ಗ್ರಾಮದಲ್ಲಿ 20 ವರ್ಷಗಳ ಹಿಂದೆ ‘ಹಮ್​ ಸಾಥ್​ ಸಾಥ್​ ಹೈ’ ಚಿತ್ರದ ಚಿತ್ರೀಕರಣದ ವೇಳೆ ನಡೆದಿದ್ದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಮಾನ್​ ಖಾನ್​ ದೋಷಿ ಎಂದು ಘೋಷಿಸಿದ ಜೋದ್​ಪುರ ಮ್ಯಾಜಿಸ್ಟ್ರೇಟ್​ ನ್ಯಾಯಾಧೀಶರಾದ ದೇವ್​ಕುಮಾರ್​ ಕಠಾರಿ ಅವರು ಸೆಕ್ಷನ್​ 9/15 ಅಡಿಯಲ್ಲಿ ಐದು ವರ್ಷ ಜೈಲು ಮತ್ತು 10 ಸಾವಿರ ರೂಪಾಯಿಗಳ ದಂಡ ವಿಧಿಸಿ ಗುರುವಾರ ತೀರ್ಪು ಪ್ರಕಟಿಸಿದ್ದರು. ಅಲ್ಲದೆ ಪ್ರಕರಣದ ಇತರೆ ಆರೋಪಿಗಳಾಗಿದ್ದ ನಟ ಸೈಫ್ ಅಲಿಖಾನ್, ಸೊನಾಲಿ ಬೇಂದ್ರೆ, ನಟಿ ಟಬು ಮತ್ತಿತರನ್ನು ನ್ಯಾಯಾಲಯ ಖುಲಾಸೆಗೊಳಿಸಿತ್ತು.
SCROLL FOR NEXT