ದೇಶ

ಕೃಷ್ಣಮೃಗ ಬೇಟೆ ಪ್ರಕರಣ: ಬಾಲಿವುಡ್ ನಟ ಸಲ್ಮಾನ್ ಖಾನ್ ಗೆ ಜಾಮೀನು ಮಂಜೂರು

Lingaraj Badiger
ಜೋಧ್ ಪುರ: ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಪ್ರಕರಣದಲ್ಲಿ ಐದು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೋಧ್ ಪುರ್ ಸೆಷನ್ಸ್ ಕೋರ್ಟ್ ಶನಿವಾರ ಜಾಮೀನು ಮಂಜೂರು ಮಾಡಿದೆ. 
ಜಾಮೀನು ಕೋರಿ ಸಲ್ಮಾನ್ ಖಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ರವೀಂದ್ರ ಕುಮಾರ್ ಜೋಶಿ ಅವರು, ಸಿಜೆಎಂ ಕೋರ್ಟ್ ನೀಡಿದ್ದ ಐದು ವರ್ಷ ಜೈಲು ಶಿಕ್ಷೆಯನ್ನು ಅಮಾನತ್ತನಲ್ಲಿಟ್ಟು, ಜಾಮೀನು ಮಂಜೂರು ಮಾಡಿದ್ದಾರೆ. ಅಲ್ಲದೆ 50 ಸಾವಿರ ರುಪಾಯಿ ಮೌಲ್ಯದ ಬಾಂಡ್ ನೀಡುವಂತೆ ಆರೋಪಿಗೆ ಸೂಚಿಸಿದ್ದಾರೆ.
20 ವರ್ಷಗಳ ಹಿಂದೆ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ಇತರೆ ನಟರ ವಿರುದ್ಧ ದಾಖಲಾಗಿದ್ದ ಕೃಷ್ಣಮೃಗ ಬೇಟೆ ಪ್ರಕರಣ ತೀರ್ಪನ್ನು ಕಳೆದ ಗುರುವಾರ ಪ್ರಕಟಿಸಿದ್ದ ರಾಜಸ್ತಾನದ ಜೋಧ್ ಪುರ್ ಸಿಜೆಎಂ ಕೋರ್ಟ್, ಸಲ್ಮಾನ್ ಖಾನ್ ಅವರನ್ನು ದೋಷಿ ಎಂದು ಘೋಷಿಸಿ, 5 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.
ತೀರ್ಪು ಪ್ರಕಟವಾಗುತ್ತಿದ್ದಂತೆ ಸಲ್ಮಾನ್ ಖಾನ್ ಅವರನ್ನು ವಶಕ್ಕೆ ಪಡೆದ ಪೊಲೀಸರು ಜೋಧ್ ಪುರ ಸೆಂಟ್ರಲ್ ಜೈಲಿಗೆ ಕೊರೆದೊಯ್ದಿದ್ದರು. ಕಳೆದ ಎರಡು ದಿನಗಳಿಂದ ಜೈಲಿನಲ್ಲಿದ್ದ ಸಲ್ಮಾನ್ ಖಾನ್ ಇಂದು ಜಾಮೀನು ಸಿಕ್ಕಿದ್ದು, ಬಾಲಿವುಟ್ ನಟ ನಿರಾಳವಾಗಿದ್ದಾರೆ.
ಹಮ್ ಸಾಥ್ ಸಾಥ್ ಹೇ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಡೆದಿದ್ದ ಬೇಟೆ ಪ್ರಕರಣ ಇದಾಗಿದ್ದು, ಸಲ್ಮಾನ್ ಮಾತ್ರವಲ್ಲದೇ, ಸೈಫ್ ಅಲಿ ಖಾನ್, ಟಬು, ಸೋನಾಲಿ ಬೇಂದ್ರೆ, ನೀಲಂ ಕೂಡ ಆರೋಪಿಗಳಾಗಿದ್ದಾರು. ಆದರೆ ಇತರೆ ಆರೋಪಿಗಳನ್ನು ಕೋರ್ಟ್ ಖುಲಾಸೆಗೊಳಿಸಿದೆ. 
SCROLL FOR NEXT