ಒಡಿಶಾ: ಎಂಜಿನ್ ಇಲ್ಲದೆ ಅಹಮದಾಬಾದ್-ಪುರಿ ರೈಲು ಹಳಿ ಮೇಲೆ ಚಲಿಸಿ ಪ್ರಯಾಣಿಕರಿಗೆ ಆಘಾತವನ್ನುಂಟುಮಾಡಿದ ಘಟನೆ ನಡೆದಿದೆ.
ಸ್ಕಿಡ್ ಬ್ರೇಕ್ ಹಾಕದ ಕಾರಣ ಒಡಿಶಾದ ಟಿಟ್ಲಾಗರ್ ನಲ್ಲಿ ಹಳಿ ಮೇಲೆ ರೈಲು ಚಲಿಸಲಾರಂಭಿಸಿತು. ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿರುವ ವಿಡಿಯೊದಲ್ಲಿ ಹಲವು ಪ್ರಯಾಣಿಕರು ಬೋಗಿಯಲ್ಲಿ ಕುಳಿತಿರುವಾಗಲೇ ರೈಲು ಹಳಿ ಮೇಲೆ ಎಂಜಿನ್ ಇಲ್ಲದೆ ಚಲಿಸುತ್ತಿರುವ ದೃಶ್ಯವನ್ನು ಕಾಣಬಹುದು. ರೈಲು ಕೆಸಿಂಗಾ ಜಂಕ್ಷನ್ ಕಡೆ ಹೋಗುತ್ತಿತ್ತು. ಪ್ಲಾಟ್ ಫಾರಂನಲ್ಲಿ ನಿಂತಿದ್ದ ಪ್ರಯಾಣಿಕರು ರೈಲಿನೊಳಗಿರುವ ಪ್ರಯಾಣಿಕರು ಚೈನ್ ನ್ನು ಎಳೆದು ರೈಲನ್ನು ನಿಲ್ಲಿಸುವಂತೆ ಬೊಬ್ಬೆ ಹಾಕುತ್ತಿರುವುದನ್ನು ಕಾಣಬಹುದು. ಕೆಲವರು ಪ್ಲಾಟ್ ಫಾರಂನಲ್ಲಿ ನಿಂತು ರೈಲು ನಿಲ್ಲಿಸುವಂತೆ ಕೈಸನ್ನೆ ಮಾಡುತ್ತಿದ್ದಾರೆ.
ವ್ಯಕ್ತಿಯೊಬ್ಬರು ಎಂಜಿನ್ ಇಲ್ಲದೆ ರೈಲು ಸಂಚರಿಸುತ್ತಿದೆ ಎಂದು ಹೇಳುತ್ತಾ ವಿಡಿಯೊ ಮಾಡಿದ್ದಾರೆ. ನಂತರ ರೈಲಿನ ವೇಗ ಸ್ವಲ್ಪ ಕಡಿಮೆಯಾಯಿತು ಎನ್ನುತ್ತಿದ್ದರು. ಆದರೆ ವಿಡಿಯೊ ಮಾಡುವವರೆಗೆ ರೈಲು ನಿಂತಿರಲಿಲ್ಲ.
ಈ ಬಗ್ಗೆ ಸಂಬಲ್ಪುರ್ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಹಿರಿಯ ಅಧಿಕಾರಿ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅವರು ಹೇಳಿದ್ದಾರೆ. ಎಂಜಿನ್ ಕಾರ್ಯವಿಧಾನವನ್ನು ಪಾಲಿಸದ ಇಬ್ಬರು ನೌಕರರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಲಾಯಿತು.