ನವದೆಹಲಿ: ಭಾರತೀಯ ಸೇನೆಯ ಯೋಧರ ಸತತ 9 ವರ್ಷಗಳ ನಿರೀಕ್ಷೆ ಕೊನೆಗೂ ಅಂತ್ಯವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿದ್ದು, ಶೀಘ್ರ ಸುಮಾರು 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ ಗಳು ನಮ್ಮ ಸೈನಿಕರ ಒಡಲು ಸೇರಲಿವೆ.
ಈ ಬಗ್ಗೆ ಹಿಂದೆಯೇ ಕೇಂದ್ರ ಸರ್ಕಾರ ನಿರ್ಧಾರ ಕೈಗೊಂಡಿತ್ತಾದರೂ, ಖರೀದಿ ಪ್ರಕ್ರಿಯೆ ಒಪ್ಪಂದದ ಹಂತದಲ್ಲೇ ಇತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಚರ್ಚೆ ಪೂರ್ಣಗೊಳಿಸಿದ್ದು ಮಾತ್ರವಲ್ಲದೇ ಬುಲೆಟ್ ಪ್ರೂಫ್ ಜಾಕೆಟ್ ಖರೀದಿ ಒಪ್ಪಂದವನ್ನೂ ಅಂತಿಮಗೊಳಿಸಿದೆ ಎನ್ನಲಾಗಿದೆ. ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿರುವಂತೆ ಕೇಂದ್ರ ಸರ್ಕಾರ ಸುಮಾರು 639 ಕೋಟಿ ವೆಚ್ಚದಲ್ಲಿ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಖರೀದಿ ಮಾಡುವ ಒಪ್ಪಂದಕ್ಕೆ ಸಹಿ ಹಾಕಿದೆ.
ಖರೀದಿಗೂ ಮುನ್ನ ಭಾರತೀಯ ಯೋಧರು ಧರಿಸಬೇಕಾದ ಜಾಕೆಟ್‌ಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದ ಅನಂತರವೇ ಒಪ್ಪಂದ ಅಂತಿಮಗೊಳಿಸಲಾಗಿದೆ ಎಂದು ಸಚಿವಾಲಯ ಹೇಳಿದೆ. ಸರ್ಕಾರಿ ಮೂಲಗಳು ತಿಳಿಸಿರುವಂತೆ
ಎಸ್‌ಎಂಪಿಪಿ ಪ್ರೈವೇಟ್ ಲಿಮಿಟೆಡ್ ಎಂಬ ಕಂಪೆನಿಯು ಜಾಕೆಟ್‌ಗಳನ್ನು ಪೂರೈಸಲಿದ್ದು, ಇದರಿಂದ ಮೇಕ್ ಇನ್ ಇಂಡಿಯಾ ಕಲ್ಪನೆಗೆ ಕೇಂದ್ರಸರ್ಕಾರ ಒತ್ತು ನೀಡಿದಂತಾಗಿದೆ.
ಇದು ಯೋಧರಿಗೆ ಎಲ್ಲ ಬದಿಯಿಂದಲೂ ಗುಂಡಿನ ದಾಳಿಯಿಂದ ರಕ್ಷಣೆ ಒದಗಿಸಲಿದೆ. ಅಷ್ಟೇ ಅಲ್ಲ, ಸ್ಟೀಲ್ ಬುಲೆಟ್‌ಗಳೂ ಈ ಜಾಕೆಟ್ ಭೇದಿಸಿ ಯೋಧರಿಗೆ ಹಾನಿ ಮಾಡಲು ಅಸಾಧ್ಯ. ಇವು ಬೊರಾನ್ ಕಾರ್ಬೈಡ್ ಸೆರಾಮಿಕ್‌ನಿಂದ ತಯಾರಿಸಲ್ಪಟ್ಟಿವೆ. ಅತ್ಯಂತ ಹಗುರ ಹಾಗೂ ದಕ್ಷವಾಗಿವೆ. ಹೀಗಾಗಿ ಅತ್ಯಂತ ಕಡಿಮೆ ಭಾರದಲ್ಲಿ ಭದ್ರತೆಯನ್ನು ಒದಗಿಸಬಲ್ಲವು ಎಂದು ಎಸ್‌ಎಂಪಿಪಿ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ಸಿ. ಕನ್ಸಾಲ್ ತಿಳಿಸಿದ್ದಾರೆ.