ನವದೆಹಲಿ; ಜಾತಿ ಆಧಾರಿತ ಮೀಸಲಾತಿ ವಿರೋಧಿಸಿ ಕೆಲ ಸಂಘಟನೆಗಳು ಭಾರತ್ ಬಂದ್'ಗೆ ಕರೆ ನೀಡಿದ್ದು, ಈ ಹಿನ್ನಲೆಯಲ್ಲಿ ಬಹಳ ಎಚ್ಚರದಿಂದ ಇರುವಂತೆ ಎಲ್ಲಾ ರಾಜ್ಯಗಳಿಗೂ ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಸೂಚನೆ ನೀಡಿದೆ.
ಜಾತಿ ಆಧಾರಿತ ಮೀಸಲಾತಿ ವಿರೋಧಿಸಿರುವ ವಿವಿಧ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರತ್ ಬಂದ್'ಗೆ ಕರೆ ನೀಡಿರುವೆ ಈ ಹಿನ್ನಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಕಟ್ಟೆಚ್ಚರ ವಹಿಸುವಂತೆ ಸಚಿವಾಲಯ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ ಎಂದು ತಿಳಿದುಬಂದಿದೆ.
ರಾಜ್ಯಗಳಲ್ಲಿ ಯಾವುದೇ ರೀತಿಯ ಘರ್ಷಣೆಗಳು ಹಾಗೂ ಅಹಿತಕರ ಘಟನೆಗಳು ನಡೆಯದಂತೆ ಆಯಾ ರಾಜ್ಯಗಳು ನೋಡಿಕೊಳ್ಳಬೇಕಿದ್ದು, ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಗಳನ್ನು ಹೆಚ್ಚಿಸಬೇಕು. ಒಂದು ವೇಳೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯುಂಟಾದರೆ ಅದಕ್ಕೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳೂ ಹಾಗೂ ಜಿಲ್ಲಾ ಪೊಲೀಸ್ ಮುಖ್ಯಸ್ಥರನ್ನು ಜವಾಬ್ದಾರರನ್ನಾಗಿ ಮಾಡುವಂತೆಯೂ ಸಚಿವಾಲಯ ಸೂಚನೆ ನೀಡಿದೆ ಎಂದು ವರದಿಗಳು ತಿಳಿಸಿವೆ.
ಮಾ.22 ರಂದು ನೀಡಿದ್ದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಎಸ್'ಸಿ/ಎಸ್'ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ದೂರು ನೀಡಿದ ತಕ್ಷಣ ಆರೋಪಿ ಬಂಧನ ಸರಿಯಲ್ಲ. ದೌರ್ಜನ್ಯ ಪ್ರಕರಣ ದಾಖಲಾಗುತ್ತಿದ್ದಂತೆಯೇ ಆರೋಪಿಯನ್ನು ಬಂಧಿಸಿ ಕ್ರಮ ಕೈಗೊಳ್ಳುವ ಮೊದಲು ಪೊಲೀಸರು ಘಟನೆ ನಡೆದ 7 ದನಗಳೊಳಗೆ ಪ್ರಾಥಮಿಕ ತನಿಖೆ ನಡೆಸಬೇಕು ಎಂದು ಹೇಳಿತ್ತು.
ನ್ಯಾಯಾಲಯದ ಈ ತೀರ್ಪಿಗೆ ರಾಷ್ಟ್ರದಾದ್ಯಂತ ತೀವ್ರ ಆಕ್ರೋಶಗಳು ವ್ಯಕ್ತವಾಗಿದ್ದವು. ಏ.2 ರಂದು ಭಾರತ್ ಬಂದ್ ಕರೆ ನೀಡಲಾಗಿತ್ತು. ಹಲವು ರಾಜ್ಯಗಳಲ್ಲಿ ದಲಿತ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಹಲವರು ಸಾವನ್ನಪ್ಪಿದ್ದರು.
ಇದೀಗ ಇದಕ್ಕೆ ತದ್ವಿರುದ್ಧವಾಗಿ ಜಾತಿ ಆಧಾರಿತ ಮೀಸಲಾತಿಗೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ, ಇಂದು ಭಾರತ್ ಬಂದ್'ಗೆ ಕರೆ ನೀಡಿವೆ.