ದೇಶ

ಚೆನ್ನೈ: ಐಪಿಎಲ್ ಪಂದ್ಯದ ವೇಳೆ ಮೈದಾನಕ್ಕೆ ಶೂ ಎಸೆದ ಪ್ರಕರಣ ಸಂಬಂಧ 21 ಮಂದಿ ಬಂಧನ

Srinivasamurthy VN
ಚೆನ್ನೈ: ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ನಡೆಯುತ್ತಿದ್ದ ವೇಳೆಯಲ್ಲಿ ಶೂ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಚೆನ್ನೈ ಪೊಲೀಸರು 21 ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ ಕಾವೇರಿ ನಿರ್ವಹಣಾ ಮಂಡಳಿ ರಚನೆಗಾಗಿ ಆಗ್ರಹಿಸಿ ಗ್ಯಾಲರಿಯಲ್ಲಿದ್ದ ಕೆಲ ಪ್ರೇಕ್ಷಕರು ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲೇ ಮೈದಾನಕ್ಕೆ ಶೂ ಮತ್ತು ಧ್ವಜಗಳನ್ನು ಎಸೆದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.  ಅಲ್ಲದೆ ಗ್ಯಾಲರಿಯಲ್ಲಿ ಕಿಡಿಗೇಡಿಗಳು ಘೋಷಣೆಗಳನ್ನು ಕೂಗವ ಮೂಲಕ ಪಂದ್ಯಕ್ಕೆ ಅಡ್ಡಿಪಡಿಸಲೆತ್ನಿಸಿದರು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು 21 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರೆಲ್ಲರೂ ನಾಮ್ ತಮಿಳರ್ ಕಚ್ಚಿ ಸಂಘಟನೆಯ ಕಾರ್ಯಕರ್ತರು ಎಂದು ತಿಳಿದುಬಂದಿದ್ದು, ನಿನ್ನೆ ಪಂದ್ಯ ಆರಂಭಕ್ಕೂ ಮುನ್ನ ಪಂದ್ಯವನ್ನು ಸ್ಥಗಿತಗೊಳಿಸಲು ಯತ್ನಿಸಿದ್ದರು. ಕ್ರಿಕೆಟ್ ಅಭಿಮಾನಿಗಳು ಮತ್ತು ಪೊಲೀಸರ ಮೇಲೆ ದಾಳಿ ನಡೆಸಿ ಪ್ರತಿಭಟನಾ ನಿರತರು, ಫ್ಯಾನ್ಸ್‌ಗೆ ಥಳಿಸಿ ಸಿಎಸ್‌ಕೆ ಜರ್ಸಿಗಳನ್ನ ಹರಿದು ಹಾಕಿದ್ದರು. 25ಕ್ಕೂ ಹೆಚ್ಚು ಫ್ಯಾನ್ಸ್‌ಗಳ ಟಿಕೆಟ್ ಹರಿದು ಹಾಕಿ ಹಾಕಿದ್ದ ಕಿಡಿಕೇಡಿಗಳು, ಎಲ್ಲ ಗೇಟ್ ಗಳ ಮುಂಭಾಗದಲ್ಲಿ ಜಮಾವಣೆಯಾಗಿ ಪ್ರತಿಭಟನಾ ಘೋಷಣೆ ಕೂಗುತ್ತಿದ್ದರು. 
ಇನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು  ಕಪ್ಪು ಟೀಶರ್ಟ್‌, ಕಪ್ಪು ಶರ್ಟ್‌ ಧರಿಸಿಕೊಂಡು ಬಂದವರನ್ನ ಕ್ರೀಡಾಂಗಣದ ಒಳಗಡೆ ಪ್ರವೇಶ ಮಾಡಲು ಅನುಮತಿ ನೀಡಿರಲಿಲ್ಲ. ಟಿಕೆಟ್‌ ಇದ್ದರೂ ಕೂಡ ಒಳಗಡೆಗೆ ಪ್ರವೇಶ ನಿರಾಕರಿಸಲಾಗಿತ್ತು. ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ಆಗ್ರಹಿಸಿ ಪ್ರತಿಭಟನಾಕಾರರು ಐಪಿಎಲ್‌ ಪಂದ್ಯ ನಡೆಸದಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದರು.
ಪ್ರಸ್ತುತ ಚೆನ್ನೈ ಪೊಲೀಸರು ಸಾಹಿತಿ ವೈರಮುತ್ತು ರಾಮಸ್ವಾಮಿ, ನಿರ್ದೇಶಕ ಪಿ ಭಾರತಿ ರಾಜ ಮತ್ತು ಶಾಸಕ ಕರುಣಾಸ್ ಮತ್ತು ಇತರೆ 500 ಪ್ರತಿಭಟನಾಕಾರರ ವಿರುದ್ಧ ದೂರು ದಾಖಲಿಸಿಕೊಂಡು ನಾಮ್ ತಮಿಳರ್ ಕಚ್ಚಿ ಸಂಘಟನೆಯ 21 ಕಾರ್ಯಕರ್ತರನ್ನು ಬಂಧಿಸಿದ್ದಾರೆ.
SCROLL FOR NEXT